ರಾಷ್ಟ್ರೀಯ

FASTag ಎಂದರೇನು? ಯಾಕೆ ಬೇಕು, ಎಲ್ಲಿ ಸಿಗುತ್ತೆ?

Pinterest LinkedIn Tumblr


ಈಗ ಕೆಲವಾರು ದಿನಗಳಿಂದ ಫಾಸ್​ಟ್ಯಾಗ್ (FASTag) ದೊಡ್ಡ ಸುದ್ದಿಯಾಗಿದೆ. 2014ರಲ್ಲೇ ಕೇಂದ್ರ ಸರ್ಕಾರ ಇದರ ಪ್ರಯೋಗ ಪ್ರಾರಂಭಿಸಿತ್ತು. ಕೆಲವೆಡೆ ನಡೆದ ಇದರ ಪರೀಕ್ಷೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈಗ ಇದರ ಬಳಕೆಯನ್ನು ಕಡ್ಡಾಯಗೊಳಿಸುತ್ತಿದೆ. ಕಾರು ಇತ್ಯಾದಿ ತ್ರಿಚಕ್ರ ಮೇಲ್ಪಟ್ಟ ವಾಹನಗಳು ಫಾಸ್​ಟ್ಯಾಗ್ ಅಳವಡಿಸಿಕೊಳ್ಳುವುದು ಅಗತ್ಯವಿದೆ. ಕೇಂದ್ರ ಸರ್ಕಾರವು ಡಿ. 15ರವರೆಗೆ ಕಾಲಾವಕಾಶ ಕೊಟ್ಟಿದೆ.

ಏನಿದು FASTag?

ಫಾಸ್​ಟ್ಯಾಗ್ ಎಂಬುದು ಬಹೂಪಯೋಗಿ ಹಣ ಪಾವತಿ ವ್ಯವಸ್ಥೆಯಾಗಿದೆ. ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿ (IHMCL) ಈ ಟ್ಯಾಗ್​ಗಳನ್ನು ತಯಾರಿಸುತ್ತದೆ. ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ತಂತ್ರಜ್ಞಾನವನ್ನು ಹೊಂದಿರುವ ಸ್ಟಿಕರ್ ಇದಾಗಿದೆ. ಇದನ್ನು ಕಾರಿನ ವಿಂಡ್ ಶೀಲ್ಡ್​ನಲ್ಲಿ ಅಂಟಿಸಬೇಕು. ಹೆದ್ದಾರಿಯಲ್ಲಿ ಟೋಲ್ ಮೂಲಕ ಸಾಗುವಾಗ ರೇಡಿಯೋ ಫ್ರೀಕ್ವೆನ್ಸಿಯಿಂದ ನಿಮ್ಮ ಕಾರಿನ ಗುರುತನ್ನು ಆಟೊಮ್ಯಾಟಿಕ್ ಆಗಿ ಪತ್ತೆ ಮಾಡಲಾಗುತ್ತದೆ. ಟೋಲ್​ನಲ್ಲಿ ಹಣ ಪಾವತಿ ಮಾಡಲು ಕಾಯುವ ಅವಶ್ಯಕತೆ ಇರುವುದಿಲ್ಲ. ನಿಗದಿತ ದರವನ್ನು ಅದೇ ಮುರಿದುಕೊಳ್ಳುತ್ತದೆ. ಟೋಲ್​ಗಳಲ್ಲಿ ಹತ್ತಾರು ನಿಮಿಷ ವ್ಯಯಿಸುವ ಪ್ರಮೇಯ ತಪ್ಪುತ್ತದೆ.

ಈ ಫಾಸ್ಟ್ಯಾಗನ್ನು ಟೋಲ್​ನಲ್ಲಷ್ಟೇ ಅಲ್ಲ ವಿವಿಧೆಡೆ ಬಳಕೆಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗುತ್ತಿದೆ. ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ಹಾಕಿಸಲು, ಪಾರ್ಕಿಂಗ್​ನಲ್ಲಿ ಹಣ ಪಾವತಿ ಮಾಡಲು ಇತ್ಯಾದಿ ಕಾರ್ಯಗಳಿಗೆ ಫಾಸ್​ಟ್ಯಾಗ್ ಬಳಕೆಯಾಗುವ ದಿನಗಳು ಸಮೀಪಿಸಿವೆ.

ಫಾಸ್​ಟ್ಯಾಗ್ ಬಳಕೆ ಹೇಗೆ?

FASTag ಅನ್ನು ನಿರ್ದಿಷ್ಟ ಹಣ ಕೊಟ್ಟು ಖರೀದಿಸಬೇಕು. ಅದಕ್ಕೆ ವಾಹನದ ಆರ್​ಸಿ ದಾಖಲೆಗಳನ್ನು ನೀಡಬೇಕಾಗುತ್ತದೆ. ಫಾಸ್​ಟ್ಯಾಗ್ ಖಾತೆಗೆ ನಿಮ್ಮ ಬ್ಯಾಂಕ್ ಅಕೌಂಟ್ ಅಥವಾ ಯುಪಿಐ ಐಡಿಯನ್ನು ಲಿಂಕ್ ಮಾಡಬೇಕಾಗುತ್ತದೆ. ಇದರಿಂದ ಸ್ವಯಂಚಾಲಿತವಾಗಿ ಟೋಲ್ ದರ ಪಾವತಿಯಾಗಲು ಸಾಧ್ಯವಾಗುತ್ತದೆ.

ಹೆಚ್​ಡಿಎಫ್​ಸಿ ಹಾಗೂ ಇತರ ಬ್ಯಾಂಕ್​ಗಳು ಫಾಸ್​ಟ್ಯಾಗ್ ಸ್ಟಿಕರ್​ಗಳನ್ನು ನೀಡುತ್ತಿವೆ. ಪೇಟಿಎಂ ಕೂಡ ಅಧಿಕೃತವಾಗಿ ಫಾಸ್​ಟ್ಯಾಗ್ ಮಾರಾಟ ಮಾಡುತ್ತಿದೆ. ನೀವು ಆನ್​ಲೈನ್​ನಲ್ಲಿ ಫಾಸ್​ಟ್ಯಾಗ್ ಖರೀದಿಸಿದರೆ ನಿಮ್ಮ ಮನೆಬಾಗಿಲಿಗೆ ಟ್ಯಾಗ್​ನ ಪಾರ್ಸಲ್ ಬರುತ್ತದೆ. ನಿಗದಿತ ದಾಖಲೆಗಳನ್ನು ಸಲ್ಲಿಸಿದರೆ ಖಾತೆ ಆ್ಯಕ್ಟಿವೇಟ್ ಆಗುತ್ತದೆ. ಕೆಲ ಟೋಲ್​ಗಳ ಪಕ್ಕದಲ್ಲಿ ಫಾಸ್​ಟ್ಯಾಗ್​ಗಳನ್ನು ನೀಡಲು ಅಂಗಡಿಗಳನ್ನು ಹಾಕಲಾಗಿದೆ.

ನೀವು ಒಂದು ವೇಳೆ ಫಾಸ್​ಟ್ಯಾಗ್ ಇಲ್ಲದೇ ಟೋಲ್​ಗಳಲ್ಲಿ ಹೋದಾಗ ನಿಗದಿತ ದರಕ್ಕಿಂತ ದುಪ್ಪಟ್ಟು ಹಣ ತೆರಬೇಕಾಗುತ್ತದೆ. FASTag ಇದ್ದರೆ ದರದಲ್ಲೂ ಕೆಲ ರಿಯಾಯಿತಿಗಳನ್ನು ನೀಡಲಾಗುತ್ತದೆ.

Comments are closed.