ರಾಷ್ಟ್ರೀಯ

2 ತಿಂಗಳಾದರೂ ನನ್ನ ಸೈಕಲ್ ರಿಪೇರಿಯಾಗಿಲ್ಲ; 10 ವರ್ಷದ ಬಾಲಕನ ದೂರು

Pinterest LinkedIn Tumblr


ತಿರುವನಂತಪುರಂ (ನ. 29): ಪೊಲೀಸ್ ಠಾಣೆಗೆ ಆಸಕ್ತಿ ಕಲಹ, ಗಂಡ-ಹೆಂಡತಿ ಗಲಾಟೆ, ಪ್ರೇಮ ಪ್ರಕರಣ, ಕೊಲೆ, ಅಪಹರಣ, ಆತ್ಮಹತ್ಯೆ, ನಾಪತ್ತೆ ಹೀಗೆ ನಾನಾ ರೀತಿಯ ದೂರುಗಳು ಪ್ರತಿದಿನವೂ ಬರುತ್ತಲೇ ಇರುತ್ತದೆ. ಆದರೆ, ಕೇರಳ ಪೊಲೀಸರಿಗೆ ಆ ದಿನ ಒಂದು ಅಚ್ಚರಿ ಕಾದಿತ್ತು. ಪೊಲೀಸ್ ಠಾಣೆಯೊಳಗೆ ಬಂದ 10 ವರ್ಷದ ಪುಟಾಣಿ ಬಾಲಕನೊಬ್ಬ ಒಂದು ಚೀಟಿಯನ್ನು ಜೇಬಿನಿಂದ ತೆಗೆದು ಪೊಲೀಸರಿಗೆ ನೀಡಿದ. ಅಷ್ಟಕ್ಕೂ ಆ ಚೀಟಿಯಲ್ಲೇನಿತ್ತು ಅಂತ ಯೋಚಿಸುತ್ತಿದ್ದೀರಾ?

ಮೆಪ್ಪಯೂರ್ ಪೊಲೀಸ್ ಠಾಣೆಗೆ ಬಂದ ಬಾಲಕ ತಾನೇ ಕೈಬರಹದಲ್ಲಿ ಬರೆದಿದ್ದ ದೂರೊಂದನ್ನು ಪೊಲೀಸರಿಗೆ ನೀಡಿದ. ‘ನನ್ನ ಮತ್ತು ನನ್ನ ತಮ್ಮನ ಸೈಕಲ್ ಹಾಳಾಗಿದ್ದರಿಂದ ಅದನ್ನು ರಿಪೇರಿ ಮಾಡಿಕೊಡಲು ಸೈಕಲ್ ಶಾಪ್​ಗೆ ಕೊಟ್ಟಿದ್ದೆವು. ಸೈಕಲ್ ರಿಪೇರಿಗೆಂದು ಆತ 200 ರೂ.ಗಳನ್ನು ತೆಗೆದುಕೊಂಡಿದ್ದಾನೆ. 2 ತಿಂಗಳಾದರೂ ಆ ಸೈಕಲ್​ಗಳನ್ನು ವಾಪಾಸ್ ಕೊಟ್ಟಿಲ್ಲ. ನಾವು ಫೋನ್ ಮಾಡಿದರೆ ಬೇಗ ರೆಡಿ ಮಾಡಿ ಕೊಡುತ್ತೇನೆ ಎಂದು ಸುಳ್ಳು ಹೇಳುತ್ತಾರೆ. ಶಾಪ್ ಹತ್ತಿರ ಹೋದರೆ ಅದು ಕ್ಲೋಸ್ ಆಗಿದೆ. ಅವರಿಗೆ ಬುದ್ಧಿ ಹೇಳಿ ಬೇಗ ಸೈಕಲ್ ಸಿಗುವಂತೆ ಮಾಡಿ’ ಎಂದು ಆ ಬಾಲಕ ಚೀಟಿಯಲ್ಲಿ ಬರೆದು ಪೊಲೀಸರಿಗೆ ಕೊಟ್ಟಿದ್ದ.

ಈ ಬಗ್ಗೆ ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆ ವರದಿ ಮಾಡಿದೆ. ಕೋಳಿಕೋಡ್​ನಲ್ಲಿರುವ ವಿಲಯತ್ತೂರ್ ಎಲಂಪಿಲಡ್ ಎಲ್​ಪಿ ಸ್ಕೂಲ್​ನಲ್ಲಿ 5ನೇ ತರಗತಿ ಓದುತ್ತಿರುವ ಅಬೀನ್ ತನ್ನ ಸೈಕಲ್ ಬೇಗ ಕೊಡಿಸಿ ಎಂದು ದೂರು ನೀಡಿದ ಬಾಲಕ. ತನ್ನ ನೋಟ್​ಬುಕ್​ನ ಹಾಳೆಯನ್ನು ಹರಿದು ಅದರಲ್ಲಿ ದೂರನ್ನು ಬರೆದು ತಂದಿದ್ದ ಬಾಲಕನನ್ನು ನೋಡಿದ ಪೊಲೀಸರು ಅವಾಕ್ಕಾದರು. ಈ ದೂರಿನ ಪ್ರತಿಯನ್ನು ಕೇರಳ ಪೊಲೀಸರು ತಮ್ಮ ಫೇಸ್​ಬುಕ್​ನಲ್ಲಿ ಹಾಕಿಕೊಂಡಿದ್ದಾರೆ.

ಆ ಬಾಲಕ ಸ್ವತಃ ಪೊಲೀಸ್ ಠಾಣೆಗೆ ಬಂದ ದೂರು ನೀಡಿದ್ದನ್ನು ನೊಡಿ ಖುಷಿಯಾದ ಪೊಲೀಸ್ ಅಧಿಕಾರಿ ರಾಧಿಕಾ ತಾವೇ ಸೈಕಲ್ ಶಾಪ್ ಬಳಿ ಹೋಗಿ ವಿಚಾರಿಸಿದ್ದಾರೆ. ತನಗೆ ಹುಷಾರಿಲ್ಲದ ಕಾರಣ ಸುಮಾರು ದಿನಗಳಿಂದ ಸೈಕಲ್ ಶಾಪ್ ಓಪನ್ ಮಾಡಿರಲಿಲ್ಲ. ಮನೆಯಲ್ಲಿ ಮಗನ ಮದುವೆಯೂ ಇದ್ದಿದ್ದರಿಂದ ಬ್ಯುಸಿಯಾಗಿದ್ದೆ. ಆದಷ್ಟು ಬೇಗ ಸೈಕಲ್ ರಿಪೇರಿ ಮಾಡಿ ಕಳುಹಿಸುತ್ತೇನೆ ಎಂದು ಶಾಪ್ ಮಾಲೀಕ ಹೇಳಿದ್ದ. ಅದರಂತೆ ಈಗಾಗಲೇ ಸೈಕಲ್ ಸಿದ್ಧಪಡಿಸಿ ಆ ಬಾಲಕನಿಗೆ ನೀಡಲಾಗಿದೆ ಎಂದು ಪೊಲೀಸರು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

Comments are closed.