ರಾಷ್ಟ್ರೀಯ

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಉದ್ಧವ್ ಠಾಕ್ರೆಗೆ ಶುಭಕೋರಿದ ಮೋದಿ

Pinterest LinkedIn Tumblr


ಹೊಸದೆಹಲಿ: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಶಿವಸೇನೆಯ ಉದ್ಧವ್ ಠಾಕ್ರೆಗೆ ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ. ಟ್ವಿಟ್ಟರ್‌ನಲ್ಲಿ ಪಿಎಂ ಮೋದಿ ಟ್ವೀಟ್ ಮಾಡುವ ಮೂಲಕ ಶುಭಾಶಯ ಸಲ್ಲಿಸಿದ್ದಾರೆ.

“ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ ಉದ್ಧವ್ ಠಾಕ್ರೆ ಅವರಿಗೆ ಶುಭಾಶಯಗಳು. ಮಹಾರಾಷ್ಟ್ರದ ಉತ್ತಮ ಭವಿಷ್ಯಕ್ಕಾಗಿ ಉದ್ಧವ್ ಠಾಕ್ರೆ ಶೃದ್ಧೆಯಿಂದ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಬುಧವಾರ ಪ್ರಮಾಣ ವಚನದ ದಿನಾಂಕ ನಿಗದಿಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಉದ್ಧವ್ ಠಾಕ್ರೆಗೆ ಕರೆ ಮಾಡಿ ಶುಭಾಶಯ ಕೋರಿದ್ದರು. ಇದೀಗ ಅಧಿಕೃತವಾಗಿ ಟ್ವಿಟ್ಟರ್‌ನಲ್ಲೇ ಶುಭಾಶಯ ಕೋರಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿಯಾಗಿ ಚುನಾವಣೆ ಎದುರಿಸಿತ್ತು. ಆದರೆ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಸಿಎಂ ಪಟ್ಟಕ್ಕಾಗಿ ಶಿವಸೇನೆ ಬೇಡಿಕೆ ಇಟ್ಟ ಪರಿಣಾಮ ಮೈತ್ರಿ ಮುರಿದುಬಿದ್ದಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಜೊತೆಗೂಡಿ ಸರಕಾರ ರಚನೆ ಕಸರತ್ತು ನಡೆಸುತ್ತಿದ್ದವು.

ಆದರೆ ರಾತ್ರೋ ರಾತ್ರಿ ನಡೆದ ಬೆಳವಣಿಗೆಯಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದರೂ ಬಹುಮತ ಸಾಬೀತು ಮಾಡಲಾಗದೆ ನಾಲ್ಕು ದಿನಗಳಲ್ಲೇ ರಾಜೀನಾಮೆ ಸಲ್ಲಿಸಿದ್ದರು.

ಗುರುವಾರ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕಾರ ಮಾಡಿದರು. ಉದ್ಧವ್ ಠಾಕ್ರೆ ಜೊತೆಗೆ ಮೂರು ಪಕ್ಷಗಳ ಒಟ್ಟು ಆರು ಸದಸ್ಯರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಏರ್ಪಡಿಸಲಾಗಿದ್ದ ಅದ್ದೂರಿ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ.

Comments are closed.