ಭಾರತದ ಟೋಲ್‍ಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದ್ದು, ಟೋಲ್ ಪ್ಲಾಜಾ ಮೂಲಕ ಹಾದುಹೋಗುವ ವಾಹನಗಳ ಟೋಲ್ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ.
ಈ ವ್ಯವಸ್ಥೆಯನ್ನು ಭಾರತದಲ್ಲಿ ಮೊದಲ ಬಾರಿಗೆ 2014ರಲ್ಲಿ ಪರಿಚಯಿಸಲಾಯಿತು. ಇದನ್ನು ಭಾರತದೆಲ್ಲೆಡೆ ಜಾರಿಗೆ ತರಲಾಗುತ್ತಿದ್ದು, ಡಿಸೆಂಬರ್ 1ರಿಂದ ಕಡ್ಡಾಯಗೊಳಿಸಲಾಗಿದೆ. ಈ ಸೌಲಭ್ಯ ಹೊಂದಿರುವ ವಾಹನಗಳು ಯಾವುದೇ ಟೋಲ್ ಪ್ಲಾಜಾ ಮೂಲಕ ಹಾದುಹೋಗುವಾಗ ಗಂಟೆಗಟ್ಟಲೇ ಟೋಲ್‍ಗಳಲ್ಲಿ ನಿಲ್ಲುವ ಅಗತ್ಯವಿಲ್ಲ. ದೇಶದಲ್ಲಿರುವ ಅನೇಕ ಬ್ಯಾಂಕುಗಳು ಆನ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್ ಖರೀದಿಸುವ ಸೌಲಭ್ಯವನ್ನು ಒದಗಿಸುತ್ತಿವೆ.
ಡಿಸೆಂಬರ್ 1ರಿಂದ ಫಾಸ್ಟ್‌ಟ್ಯಾಗ್ ಸೌಲಭ್ಯವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಬಹುತೇಕ ವಾಹನ ಮಾಲೀಕರು ಹೊಸ ಸೌಲಭ್ಯವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದುವರೆಗೆ ಬರೋಬ್ಬರಿ 70 ಲಕ್ಷ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಅಳವಡಿಕೆ ಮಾಡಲಾಗಿದ್ದು, ಇನ್ನುಳಿದ ವಾಹನಗಳಿಗೂ ಹೊಸ ಸೌಲಭ್ಯ ಅಳವಡಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ನವೆಂಬರ್ 21 ರಿಂದ 2019 ರ ಡಿಸೆಂಬರ್ 1 ರವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಉಚಿತವಾಗಿ ವಿತರಿಸುತ್ತಿದ್ದು, ಈ ಕಾರಣಕ್ಕೆ ಕಳೆದ ಒಂದು ವಾರದಲ್ಲಿ ಬರೋಬ್ಬರಿ 2 ಲಕ್ಷ ವಾಹನ ಮಾಲೀಕರು ಫಾಸ್ಟ್‌ಟ್ಯಾಗ್ ಪಡೆದುಕೊಂಡಿದ್ದಾರೆ. ಪ್ರಸ್ತುತ, ದೇಶದ 560 ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಮುಂದಿನ 10 ದಿನಗಳ ಅವಧಿಯಲ್ಲಿ ಮತ್ತಷ್ಟು ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಕೆಯಾಗುವ ನೀರಿಕ್ಷೆಯಿದೆ.
ಇನ್ನು ಫಾಸ್ಟ್‌ಟ್ಯಾಗ್ ಇಲ್ಲದ ವಾಹನ ಸವಾರರು ಡಿಸೆಂಬರ್ 1ರಿಂದ ದುಪ್ಪಟ್ಟು ಶುಲ್ಕ ಪಾವತಿ ಮಾಡಬೇಕಿದ್ದು, ಈ ಸಂಬಂಧ ದೇಶದ ಬಹುತೇಕ ಟೋಲ್ ಗೇಟ್‌ಗಳನ್ನು ಉನ್ನತೀಕರಿಸಲಾಗಿದೆ. ಇದರಿಂದ ಗಂಟೆಗಟ್ಟಲೇ ಕ್ಯೂ ನಿಂತು ಟೋಲ್ ಶುಲ್ಕ ಕಟ್ಟುವ ತಾಪತ್ರಯ ಇನ್ಮುಂದೆ ಕಡಿಮೆಯಾಗಲಿದ್ದು, ವಾಹನಗಳ ಮಾಲೀಕರಿಗೆ ಫಾಸ್ಟ್‌ಟ್ಯಾಗ್ ಖರೀದಿಗೂ ಸಹ ಸರಳವಾಗುವಂತೆ ಹಲವು ಸೌಲಭ್ಯಗಳನ್ನು ತೆರೆಯಲಾಗಿದೆ.
ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಡಿಎಫ್‌ಸಿ, ಎಸ್‌ಬಿಐ, ಹೆಚ್‌ಡಿಎಫ್‌ಸಿ, ಸಿಂಡಿಕೇಟ್, ಪೇಟಿಎಂ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳಲ್ಲಿ ಫಾಸ್ಟ್‌ಟ್ಯಾಗ್‍ಗೆ ಅರ್ಜಿ ಸಲ್ಲಿಸಬಹುದು. ನಂತರ ಫಾಸ್ಟ್‌ಟ್ಯಾಗ್ ಅನ್ನು ನೇರವಾಗಿ ನಿಮ್ಮ ಮನೆಗೆ ತಲುಪಿಸಲಾಗುತ್ತದೆ.
ಇದರೊಂದಿಗೆ, ಫಾಸ್ಟ್‌ಟ್ಯಾಗ್ ಅನ್ನು ಟೋಲ್ ಪ್ಲಾಜಾ ಅಥವಾ ಅಧಿಕೃತ ಏಜೆನ್ಸಿ ಮೂಲಕವೂ ಖರೀದಿಸಬಹುದು. ಗ್ರಾಹಕರು ಆನ್‌ಲೈನ್ ಫಾರಂ ಅನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕಾಗುತ್ತದೆ.
ಫಾಸ್ಟ್‌ಟ್ಯಾಗ್‍ಗಳನ್ನು ಎಲ್ಲಿ ಬಳಸಬೇಕು?
ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳು ಸೇರಿದಂತೆ ದೇಶಾದ್ಯಂತವಿರುವ 560ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್‍ಗಳನ್ನು ಬಳಸಬಹುದು. ಡಿಸೆಂಬರ್ 1ರಿಂದ ಬಸ್, ಟ್ರಕ್, ಟ್ರಾಕ್ಟರ್ ಹಾಗೂ ಇತರ ಕಮರ್ಶಿಯಲ್ ವಾಹನಗಳು ಸೇರಿದಂತೆ ಎಲ್ಲಾ ನಾಲ್ಕು ಚಕ್ರಗಳಿಗೆ ಫಾಸ್ಟ್‌ಟ್ಯಾಗ್ ಅನ್ನು ಕಡ್ಡಾಯವಾಗಿರುತ್ತದೆ.
ಫಾಸ್ಟ್‌ಟ್ಯಾಗ್‍ಗಳನ್ನು ರೀಚಾರ್ಜ್ ಮಾಡುವುದು ಹೇಗೆ?
ಚೆಕ್, ಆನ್‌ಲೈನ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಆರ್‌ಟಿಜಿಎಸ್ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕವೂ ಫಾಸ್ಟ್‌ಟ್ಯಾಗ್‍ಗಳನ್ನು ರೀಚಾರ್ಜ್ ಮಾಡಬಹುದು.
ಗ್ರಾಹಕರು ರೂ.100ನಿಂದ ರೂ.1 ಲಕ್ಷದವರೆಗೆ ರೀಚಾರ್ಜ್ ಮಾಡಬಹುದು. ಗ್ರಾಹಕರು ಸುಲಭವಾಗಿ ರೀಚಾರ್ಜ್ ಮಾಡಲು ಬೇರೆ ಬೇರೆ ಏಜೆನ್ಸಿಗಳು ಬೇರೆ ಬೇರೆ ವಿಧಾನಗಳನ್ನು ಹಾಗೂ ಆಯ್ಕೆಗಳನ್ನು ನೀಡಲಾಗಿದೆ. ಅವುಗಳನ್ನು ಅನುಸರಿಸುವ ಮೂಲಕ ಫಾಸ್ಟ್‌ಟ್ಯಾಗ್‍ಗಳನ್ನು ರೀಚಾರ್ಜ್ ಮಾಡಬಹುದು.

Comments are closed.