ಜೈಪುರ್: ಪಾಕಿಸ್ತಾನದಿಂದ ವಲಸೆ ಬಂದ 21 ಮಂದಿ ಹಿಂದೂಗಳಿಗೆ ರಾಜಸ್ಥಾನ್ ಸರ್ಕಾರ ಬುಧವಾರ ಭಾರತೀಯ ಪೌರತ್ವ ನೀಡಿರುವುದಾಗಿ ತಿಳಿಸಿದೆ. 21 ಪಾಕಿಸ್ತಾನಿ ಹಿಂದೂಗಳಿಗೆ ಭಾರತೀಯ ಪೌರತ್ವ ನೀಡಿರುವ ಪತ್ರವನ್ನು ಜೈಪುರ್ ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.
ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ್ ರಾಯ್ ಲೋಕಸಭೆಗೆ ನೀಡಿರುವ ಮಾಹಿತಿ ಪ್ರಕಾರ, ಜುಲೈ ತಿಂಗಳಿನಲ್ಲಿ ಒಟ್ಟು 1,310 ವಲಸಿಗರಿಗೆ ರಾಜಸ್ಥಾನ್ ಸರ್ಕಾರ ಪೌರತ್ವವನ್ನು ನೀಡಿದೆ. ಜೋಧಪುರ್, ಜೈಸಲ್ಮೇರ್ ಮತ್ತು ಜೈಪುರ್ ಜಿಲ್ಲಾಧಿಕಾರಿಗಳಿಗೆ ಪೌರತ್ವ ಪತ್ರವನ್ನು ನೀಡಲಾಗಿದೆ ಎಂದು ತಿಳಿಸಿದರು.
ಜನವರಿ 8ರಂದು ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರವಾಗಿತ್ತು. ಈ ಪ್ರಕಾರ 2014ರ ಡಿಸೆಂಬರ್ 31ರ ಮೊದಲು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಿಂದ ಭಾರತಕ್ಕೆ ಬಂದ ಮುಸ್ಲಿಮೇತರ ಪ್ರಜೆಗಳಿಗೆ ಪೌರತ್ವ ಒದಗಿಸಲಾಗುವುದು. ಏತನ್ಮಧ್ಯೆ ಈ ಕಾಯ್ದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಳ್ಳಲು ಬಾಕಿ ಇದೆ.
ಅಲ್ಲದೇ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಹಿಂದೂಗಳು, ಸಿಖ್ಖ, ಬೌದ್ಧರು, ಜೈನರು, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸೇರಿದಂತೆ ಆರು ಅಲ್ಪಸಂಖ್ಯಾತ ಸಮುದಾಯದ ವಲಸಿಗರಿಗೆ ಭಾರತೀಯ ಪೌರತ್ವ ನೀಡಲು ರಾಜಸ್ಥಾನದ ಮೂರು ಜಿಲ್ಲೆ(ಜೋಧ್ ಪುರ್, ಜೈಸಲ್ಮೇರ್ ಮತ್ತು ಜೈಪುರ್)ಗಳಿಗೆ ಕೇಂದ್ರ ಸರ್ಕಾರ ಅಧಿಕಾರವನ್ನು ನೀಡಿರುವುದಾಗಿ ವಿವರಿಸಿದ್ದಾರೆ.
Comments are closed.