ರಾಷ್ಟ್ರೀಯ

ಪ್ರೀತಿ ಮಾಡಿ ಮದುವೆಯಾಗಿದ್ದ ಪುತ್ರಿಯ ಮಗುವನ್ನು 3 ಲಕ್ಷಕ್ಕೆ ಮಾರಾಟ ಮಾಡಿದ ಅಜ್ಜ-ಅಜ್ಜಿ

Pinterest LinkedIn Tumblr


ಚೆನ್ನೈ: ಪ್ರೀತಿಸಿ ಮದುವೆಯಾಗಿದ್ದ ಮಗಳ ಎರಡು ತಿಂಗಳ ಕಂದನನ್ನು ಆಕೆಯ ಪೋಷಕರೇ 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ ಅಮಾನವೀಯ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ನಾಲ್ಕು ತಿಂಗಳ ಬಳಿಕ ಮಗು ತಾಯಿಯ ಮಡಿಲು ಸೇರಿದೆ.

ತಮಿಳುನಾಡಿನ ನಾಯನಂಪಟ್ಟಿ ನಿವಾಸಿ ಪೊನ್ನುಸ್ವಾಮಿ ಮಗುವನ್ನು ಮಾರಿದ್ದ ಅಜ್ಜ. ಮಗಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾಗ ಆರೋಪಿ ಕೃತ್ಯ ಎಸಗಿದ್ದ. ಪೊನ್ನುಸ್ವಾಮಿ ಜುಲೈ 17ರಂದು ಮಗುವನ್ನು ಮಾರಿದ್ದ.

ಪೊನ್ನುಸ್ವಾಮಿ ಮಗಳು ಮೀನಾ ಅದೇ ಗ್ರಾಮದ ರಾಜಾಲುನನ್ನು ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಎರಡು ವರ್ಷದ ಹಿಂದೆ ಮದುವೆಯಾಗಿದ್ದಳು. ಬಳಿಕ ರಾಜಾಲು ದಂಪತಿ ತಿರುಪ್ಪೂರ್ ಗೆ ಬಂದು ಅಲ್ಲಿಯೇ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಇದೇ ವರ್ಷ ಮೀನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮೀನಾ ಕೊಯಂಬತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದರು.

ಈ ವಿಷಯ ತಿಳಿದು ಆಸ್ಪತ್ರೆಗೆ ಬಂದಿದ್ದ ಪೊನ್ನುಸ್ವಾಮಿ ದಂಪತಿ, ಮೀನಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ಮೀನಾ ಜುಲೈ 17ರಂದು ಪ್ರಜ್ಞೆ ಕಳೆದುಕೊಂಡಿದ್ದರು. ಈ ವೇಳೆ ಪೊನ್ನುಸ್ವಾಮಿ, ಮೀನಾಳ ಎರಡು ತಿಂಗಳ ಮಗುವನ್ನು ವಿಲ್ಲುಪುರಂನಲ್ಲಿ ಮೂರು ಲಕ್ಷ ರೂಪಾಯಿಗೆ ಮಾರಿದ್ದ. ಅಷ್ಟೇ ಅಲ್ಲದೆ ಮೀನಾಳ ಪತಿ ರಾಜಾಲುನ ಮೇಲೆ ಹಲ್ಲೆ ನಡೆಸಿ ಆಸ್ಪತ್ರೆಯಿಂದ ಹೊರಹಾಕಿದ್ದ.

ಜುಲೈ 21ರಂದು ಎಚ್ಚರಗೊಂಡ ಮೀನಾ ತನ್ನ ಪತಿ ಹಾಗೂ ಮಗು ಎಲ್ಲಿದ್ದಾರೆ ಎಂದು ಪೋಷಕರಿಗೆ ಕೇಳಿದ್ದಳು. ಆದರೆ ಆಕೆಗೆ ಯಾವುದೇ ಮಾಹಿತಿ ನೀಡಿದೆ, ಪತಿ ಹಾಗೂ ಮಗುವನ್ನು ಮರೆಸುವ ಯತ್ನವನ್ನು ಪೋಷಕರು ಮಾಡುತ್ತಿದ್ದರು. ಅವರಿಂದ ತಪ್ಪಿಸಿಕೊಂಡು ಬಂದ ಮೀನಾ ಸಂಬಂಧಿಕರ ಸಹಾಯದಿಂದ ಗಂಡನನ್ನು ಭೇಟಿಯಾಗಿದ್ದಳು. ಬಳಿಕ ದಂಪತಿ ನವೆಂಬರ್ 18ರಂದು ಸೇಲಂ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಅಳಲು ತೋಡಿಕೊಂಡಿದ್ದರು.

ರಾಜಾಲು ದಂಪತಿ ಸಹಾಯಕ್ಕೆ ನಿಂತ ಸೇಲಂ ಜಿಲ್ಲಾಧಿಕಾರಿ ಮಗುವನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ಆದೇಶ ನೀಡಿದ್ದರು. ತಕ್ಷಣವೇ ಪೊಲೀಸರು ಪೊನ್ನುಸ್ವಾಮಿಯನ್ನು ವಿಚಾರಣೆ ನಡೆಸಿ, ವಿಲ್ಲುಪುರಂ ಜಿಲ್ಲೆಯ ತಿರುವಾವಲೂರಿನ ದಂಪತಿ ಬಳಿ ಇದ್ದ ಮಗು ವಶಕ್ಕೆ ಪಡೆದಿದ್ದಾರೆ. ನಂತರ ಮಗುವನ್ನು ಡಿಎನ್‍ಎ ಪರೀಕ್ಷೆಗೆ ಒಳಪಡಿಸಿ, ಮೀನಾ-ರಾಜಾಲು ದಂಪತಿಗೆ ಒಪ್ಪಿಸಿದ್ದಾರೆ.

Comments are closed.