ರಾಷ್ಟ್ರೀಯ

ಅಮ್ಮನ ಮನೆ ಸೇರಿದ ಹೆಂಡತಿ- ನಡುರಸ್ತೆಯಲ್ಲೇ ಅತ್ತೆಯನ್ನು ಕೊಂದು, ಪತ್ನಿಗೂ ಚಾಕು ಇರಿದ

Pinterest LinkedIn Tumblr


ಅಹಮದಾಬಾದ್: ಪತಿ ಕಿರುಕುಳ ನೀಡುತ್ತಾನೆ ಎಂದು ಪತ್ನಿ ತನ್ನ ತಾಯಿ ಮನೆ ಸೇರಿದ್ದಳು ಹಾಗೂ ಪತಿ ವಿರುದ್ಧ ದೂರು ಕೂಡ ನೀಡಿದ್ದಳು. ಇದರಿಂದ ರೊಚ್ಚಿಗೆದ್ದ ಪತಿರಾಯ ನಡುರಸ್ತೆಯಲ್ಲಿಯೇ ಪತ್ನಿ ಮತ್ತು ಅತ್ತೆಗೆ ಚಾಕು ಇರಿದಿದ್ದು, ಸ್ಥಳದಲ್ಲೇ ಅತ್ತೆ ಸಾವನ್ನಪ್ಪಿರುವ ಘಟನೆ ಗುಜರಾತ್‍ನಲ್ಲಿ ನಡೆದಿದೆ.

ಕಲುಪುರ್ ನಿವಾಸಿ ಶೈಲೇಶ್ ಠಾಕೋರ್(35) ಆರೋಪಿ. ಶೈಲೇಶ್ ಪತ್ನಿ ಹೇತಲ್ ಠಾಕೋರ್(27) ಅವರ ತಾಯಿ ಶಾಂತ ಠಾಕೋರ್(47) ಕೊಲೆಯಾದ ದುರ್ದೈವಿ. ಶೈಲೇಶ್ ಪ್ರತಿನಿತ್ಯ ನೀಡುತ್ತಿದ್ದ ಕಿರುಕುಳ, ಹಿಂಸೆ ತಾಳಲಾರದೆ ಹೇತಲ್ ಮನೆಬಿಟ್ಟು ತವರನ್ನು ಸೇರಿದ್ದಳು. ಈ ವೇಳೆ ಮಗಳ ಕಷ್ಟ ಕಂಡು ಕೋಪಗೊಂಡ ಶಾಂತ ಅವರು, ಎನ್‍ಜಿಒ ಒಂದರ ಸಹಾಯದಿಂದ ಶೈಲೇಶ್ ವಿರುದ್ಧ ಪೊಲೀಸರಿಗೆ ಅಳಿಯನ ದೂರು ನೀಡಿದ್ದರು. ಆದ್ದರಿಂದ ತಾಯಿ, ಮಗಳ ಮೇಲೆ ಶೈಲೇಶ್ ದ್ವೇಷವಿಟ್ಟುಕೊಂಡಿದ್ದನು.

ಈ ಸಂಬಂಧ ಶನಿವಾರ ಕೋರ್ಟಿನಲ್ಲಿ ವಿಚಾರಣೆ ಇತ್ತು. ಹೀಗಾಗಿ ಶಾಂತ ಹಾಗೂ ಹೇತಲ್ ಕೋರ್ಟಿಗೆ ಹೋಗುವ ಮೊದಲು ಎನ್‍ಜಿಒಗೆ ತೆರೆಳುತ್ತಿದ್ದರು. ಈ ಬಗ್ಗೆ ತಿಳಿದ ಶೈಲೇಶ್ ಅವರು ಹೋಗುವ ರಸ್ತೆಯಲ್ಲಿ ಅಡಗಿ ಕುಳಿತಿದ್ದನು. ಶಾಂತ ಹಾಗೂ ಹೇತಲ್ ರಸ್ತೆಯಲ್ಲಿ ಬರುತ್ತಿದ್ದಾಗ ಶೈಲೇಶ್ ಏಕಾಏಕಿ ಅವರಿಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಜೊತೆಗೆ ಇಬ್ಬರಿಗೂ ಚಾಕು ಇರಿದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಈ ವೇಳೆ ಗಂಭೀರ ಗಾಯಗೊಂಡಿದ್ದ ಶಾಂತ ಸ್ಥಳದಲ್ಲೇ ಸಾವನ್ನಪ್ಪಿದ್ದು, ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಹೇತಲ್ ಅವರನ್ನು ಕಂಡು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಹೇತಲ್ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಈ ಸಂಬಂಧ ವಿಚಾರಣೆ ಮುಂದುವರಿಸಿದ್ದಾರೆ.

Comments are closed.