ರಾಷ್ಟ್ರೀಯ

ಅಯೋಧ್ಯೆ ತೀರ್ಪಿಗಾಗಿ 27 ವರ್ಷ ಉಪವಾಸ

Pinterest LinkedIn Tumblr


ಭೋಪಾಲ್:ರಾಮನಿಗಾಗಿಯೇ ಹಲವಾರು ವರ್ಷಗಳ ಕಾಲ ಕಳೆದಿದ್ದ ಶಬರಿ ಕಥೆ ಬಹುತೇಕರಿಗೆ ತಿಳಿದಿದೆ. ಇದೀಗ ಆ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಸಂಸ್ಕೃತದ ಮಾಜಿ ಶಿಕ್ಷಕಿ ಅಯೋಧ್ಯೆ ತೀರ್ಪಿಗಾಗಿ 1992ರಿಂದ ಕೇವಲ ಹಾಲು, ಹಣ್ಣು ತಿಂದು ಕಾಲಕಳೆದಿರುವ ಘಟನೆ ವರದಿಯಾಗಿದ್ದು, ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ತನ್ನ ತಾಯಿ ಊಟೋಪಚಾರ ಆರಂಭಿಸಲಿದ್ದಾರೆ ಎಂದು ಪುತ್ರ ತಿಳಿಸಿದ್ದಾರೆ.

ವಿವಾದಿತ ಅಯೋಧ್ಯೆಯ ಸ್ಥಳದಲ್ಲಿಯೇ ರಾಮಮಂದಿರ ನಿರ್ಮಿಸಲು ಸುಪ್ರೀಂಕೋರ್ಟ್ ಶನಿವಾರ ತೀರ್ಪು ಘೋಷಣೆಯಾದ ನಂತರ ಮಧ್ಯಪ್ರದೇಶದ ಜಬಲ್ ಪುರದ ನಿವೃತ್ತ ಸಂಸ್ಕೃತ ಶಿಕ್ಷಕಿ ಊರ್ಮಿಳಾ ಚತುರ್ವೇದಿ(81) ಸಂತಸ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ವಿವಾದ ಬಗೆಹರಿಯಲೇಬೇಕು ಎಂದು ಹಠ ಹಿಡಿದಿದ್ದ ಊರ್ಮಿಳಾ ಅವರು ತಮ್ಮ 54ನೇ(1992) ವಯಸ್ಸಿನಲ್ಲಿ ಕೇವಲ ಹಣ್ಣು ಮತ್ತು ಹಾಲು ಕುಡಿಯುವ ಮೂಲಕ ಉಪವಾಸ ಆರಂಭಿಸಿದ್ದರು.

ಇವರು ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು. 1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸಗೊಂಡ ನಂತರ ಸಂಭವಿಸಿದ ಹಿಂಸಾಚಾರದಿಂದ ತೀವ್ರ ನೊಂದುಕೊಂಡಿದ್ದರ ಎಂದು ಪುತ್ರ ಅಮಿತ್ ಚತುರ್ವೇದಿ ಪಿಟಿಐ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ಆ ಬಳಿಕ ನನ್ನ ತಾಯಿ ಅಯೋಧ್ಯೆ ವಿವಾದ ಬಗೆಹರಿಯುವವರೆಗೂ ಭಾಗಶಃ ಉಪವಾಸ ಮಾಡಲು ನಿರ್ಧರಿಸಿದ್ದು, ಕೇವಲ ಹಾಲು ಮತ್ತು ಹಣ್ಣು ಸೇವಿಸುತ್ತಿದ್ದರು. ಮಧ್ಯಾಹ್ನ, ರಾತ್ರಿ ಊಟ ಮಾಡಲು ಒಪ್ಪುತ್ತಲೇ ಇರಲಿಲ್ಲ. ಹಲವು ಬಾರಿ ಉಪವಾಸ ಕೈಬಿಡುವಂತೆ ಸಂಬಂಧಿಕರು ಮನವಿ ಮಾಡಿಕೊಂಡಿದ್ದರು. ಅದನ್ನು ತಿರಸ್ಕರಿಸಿದ್ದರು. ಇದೀಗ 81 ವರ್ಷದ ಊರ್ಮಿಳಾ ಅವರು ಅಯೋಧ್ಯೆ ವಿವಾದ ಬಗೆಹರಿದಿದ್ದಕ್ಕೆ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಪುತ್ರ ಅಮಿತ್ ವಿವರಿಸಿದ್ದಾರೆ.

ಈ ಬಗ್ಗೆ ತಾನು ಸುಪ್ರೀಂಕೋರ್ಟ್ ನ ಸಿಜೆಐ ರಂಜನ್ ಗೋಗೊಯಿ ಅವರಿಗೆ ಪತ್ರ ಬರೆದು ಧನ್ಯವಾದ ತಿಳಿಸುವುದಾಗಿ ಹೇಳಿದ್ದಾರೆ. ಅಲ್ಲದೇ ತಾಯಿಯ ಉಪವಾಸ ಸತ್ಯಾಗ್ರಹ ಕೊನೆಗೊಳಿಸಲು ಶೀಘ್ರವೇ ಉದ್ಯಾಪನ್ ಸಮಾರಂಭವನ್ನು ಆಯೋಜಿಸುವುದಾಗಿ ಅಮಿತ್ ತಿಳಿಸಿದ್ದಾರೆ.

Comments are closed.