ರಾಷ್ಟ್ರೀಯ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಂದೂಕುಧಾರಿ ವಧು-ವರ

Pinterest LinkedIn Tumblr

ಗುವಾಹತಿ, ನ.12: ವಿವಾಹ ಮಂಟಪದಲ್ಲಿ ವಧು-ವರರು ಬಂದೂಕು ಹಿಡಿದು ನಿಂತರೆ ಹೇಗಿರುತ್ತದೆ? ಅಕ್ಷರಶಃ ಇಂಥ ಅಪರೂಪದ ಘಟನೆ ನಾಗಾಲ್ಯಾಂಡ್‌ನ ಧಿಂಪುರದಲ್ಲಿ ಶನಿವಾರ ನಡೆಯಿತು.

ನ್ಯಾಷನಲ್ ಸೋಶಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ ಯುನಿಫಿಕೇಶನ್ (ಎನ್‌ಎಸ್‌ಸಿಎ-ಯು) ಸಂಘಟನೆಯ ‘ಗೃಹಸಚಿವ’ (ಕಿಲೊ ಕಿಲೋನ್ಸೆರ್) ಬೊಹೊಟೊ ಕಿಬಾ ಅವರ ಮಗ ಹಾಗೂ ಸೊಸೆ ವಿವಾಹ ಮಂಪಟದಲ್ಲಿ ಬಂದೂಕುಧಾರಿಗಳಾಗಿ ಫೋಟೊಗೆ ಫೋಸ್ ನೀಡಿದಾಗ ಬಂದಿದ್ದ ಅತಿಥಿಗಳು ದಂಗಾದರು. ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜ್ಯದ ವಾಣಿಜ್ಯ ರಾಜಧಾನಿ ಎನಿಸಿದ ಧಿಮ್‌ಪುರದಲ್ಲಿ ಈ ವಿವಾಹ ಔತಣಕೂಟ ನಡೆದಿದ್ದು, ವಧು-ವರರು ಎಕೆ-56 ಮತ್ತು ಎಂ16 ಅಸಾಲ್ಟ್ ರೈಫಲ್ ಹಿಡಿದು, ನಗುತ್ತಾ ಕ್ಯಾಮೆರಾಗಳಿಗೆ ಫೋಸ್ ನೀಡಿದ ವೇಳೆ ಹಲವು ಮಂದಿ ಅತಿಥಿಗಳು ಅಲ್ಲಿದ್ದರು.

ಈ ಬಂಡುಕೋರ ಸಂಘಟನೆಯ ಸದಸ್ಯರಿಗೆ ಸೇನಾ ಹುದ್ದೆಗಳ ನಾಮಕರಣ ಮಾಡಿರುವ ಬಗ್ಗೆ “ಸ್ವಯಂಘೋಷಿತ” ಎಂದು ಮಾಧ್ಯಮಗಳು ವರದಿ ಮಾಡಿದ್ದಕ್ಕೆ ಪತ್ರಕರ್ತರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುವ ಮೂಲಕ ಕಿಬಾ ವಿವಾದದ ಕೇಂದ್ರಬಿಂದುವಾಗಿದ್ದರು.

ಅತಿದೊಡ್ಡ ಹಾಗೂ ಅತ್ಯಂತ ಹಳೆಯ ನಾಗಾ ಬಂಡುಕೋರ ಸಂಘಟನೆಯಾದ ಎನ್‌ಎಸ್‌ಸಿಎನ್-ಇಸಾಕ್ ಮುವಾಹ್‌ನಿಂದ ಸಿಡಿದ ಸಂಘಟನೆ ಇದಾಗಿದೆ. ನಾಗಾ ನ್ಯಾಷನಲ್ ಪೊಲಿಟಿಕಲ್ ಗ್ರೂಪ್ ಹೆಸರಿನಲ್ಲಿ ಕೇಂದ್ರದ ಜತೆ ಶಾಂತಿ ಮಾತುಕತೆ ನಡೆಸುತ್ತಿರುವ ಏಳು ಉಗ್ರ ಸಂಘಟನೆಗಳ ಪೈಕಿ ಎನ್‌ಎಸ್‌ಸಿಎನ್-ಯು ಕೂಡಾ ಒಂದು.

Comments are closed.