ರಾಷ್ಟ್ರೀಯ

ನ.26ರ ಸಭೆಯ ಬಳಿಕ 5 ಎಕರೆ ಭೂಮಿ ಪಡೆಯುವ ಕುರಿತು ನಿರ್ಧರಿಸುತ್ತೇವೆ: ಸುನ್ನಿ ವಕ್ಫ್​ ಬೋರ್ಡ್​

Pinterest LinkedIn Tumblr


ಲಖನೌ: ಅಯೋಧ್ಯಾ ಭೂವಿವಾದಕ್ಕೆ ಸಂಬಂಧಪಟ್ಟಂತೆ ನಿನ್ನೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಬಹುತೇಕ ಮುಸ್ಲಿಮರೂ ತೃಪ್ತಿಯಿದೆ ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿ, ಮುಸ್ಲಿಮರಿಗೆ ಮಸೀದಿ ನಿರ್ಮಾಣ ಮಾಡಲು ಬೇರೆ ಕಡೆಯಲ್ಲಿ 5 ಎಕರೆ ಭೂಮಿ ನೀಡಬೇಕು ಎಂದು ಸುಪ್ರೀಂಕೋರ್ಟ್​ ಸೂಚನೆ ನೀಡಿದೆ.

ಸುಪ್ರೀಂಕೋರ್ಟ್​ ತೀರ್ಪಿನ ವಿರುದ್ಧ ಮತ್ತೆ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ನಿನ್ನೆ ಹೇಳಿರುವ ಸುನ್ನಿ ವಕ್ಫ್​ ಮಂಡಳಿ ಇವತ್ತು ಮತ್ತೊಂದು ಹೇಳಿಕೆ ನೀಡಿದೆ. ಅಯೋಧ್ಯೆಯಲ್ಲಿ ಬೇರೆ ಕಡೆ ಮಸೀದಿ ನಿರ್ಮಾಣ ಮಾಡಲು ಐದು ಎಕರೆ ಜಮೀನನ್ನು ಸರ್ಕಾರದಿಂದ ಪಡೆಯಬೇಕೋ, ಬೇಡವೋ ಎಂಬುದನ್ನು ಚರ್ಚೆ ಮಾಡಲು ನ.26ರಂದು ಸಭೆ ನಡೆಸುತ್ತೇವೆ. ಬಳಿಕವಷ್ಟೇ ಆ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸುತ್ತೇವೆ ಎಂದು ಸುನ್ನಿ ವಕ್ಫ್​ ಮಂಡಳಿ ತಿಳಿಸಿದೆ.

ಮಂಡಳಿಯ ಚೇರ್ಮನ್​ ಜುಫಾರ್​ ಫಾರೂಕಿ ಹೇಳಿಕೆ ನೀಡಿದ್ದು, ವಕ್ಫ್​ ಮಂಡಳಿಯ ಸಾಮಾನ್ಯ ಸಭೆ ನವೆಂಬರ್​ 26ರಂದು ನಡೆಯಬಹುದು. ಸುಪ್ರೀಂಕೋರ್ಟ್ ಮಸೀದಿ ನಿರ್ಮಾಣಕ್ಕೆ ನೀಡಲು ಉದ್ದೇಶಿಸಿರುವ 5 ಎಕರೆ ಜಾಗವನ್ನು ಪಡೆಯಬೇಕೋ, ಬೇಡವೋ ಎಂಬ ಬಗ್ಗೆ ಆ ಸಭೆಯಲ್ಲಿ ನಿರ್ಧರಿಸುತ್ತೇವೆ ಎಂದು ತಿಳಿಸಿದ್ದಾರೆ.
ನ.13ರಂದು ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈಗ ನ.26ಕ್ಕೆ ಮುಂದೂಡಲಾಗಿದೆ. ಮಸೀದಿ ನಿರ್ಮಾಣಕ್ಕಾಗಿ ಭೂಮಿಯನ್ನು ಪಡೆಯುವ ಬಗ್ಗೆ ಹಲವರು ರೀತಿಯ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹಾಗಾಗಿ ಸೂಕ್ತ ಚರ್ಚೆ ಅಗತ್ಯವಿದೆ ಎಂದಿದ್ದಾರೆ.

ಭೂಮಿಯನ್ನು ಮಸೀದಿ ನಿರ್ಮಾಣಕ್ಕಾಗಿ ತೆಗೆದುಕೊಳ್ಳುವ ಬದಲು ಅಲ್ಲಿ ಶೈಕ್ಷಣಿಕ ಸಂಸ್ಥೆಯನ್ನು ಕಟ್ಟಿ. ಆ ಸಂಸ್ಥೆಯ ಆವರಣದಲ್ಲಿ ಮಸೀದಿಯನ್ನು ನಿರ್ಮಿಸಿ ಎಂದು ಸಲಹೆಗಳನ್ನು ನೀಡಿದ್ದಾರೆ. ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುತ್ತದೆ. ಅದರಂತೆ ಭೂಮಿಯನ್ನು ತೆಗೆದುಕೊಳ್ಳಲೇಬೇಕು ಎಂದಿದ್ದರೆ ನಾವು ಅದನ್ನು ಎಲ್ಲಿ ಪಡೆಯಬೇಕು, ಹೇಗೆ ಪಡೆಯಬೇಕು ಎಂಬುದರ ಬಗ್ಗೆಯೂ ಸೂಕ್ತ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

Comments are closed.