ರಾಷ್ಟ್ರೀಯ

ಜಾತ್ರೆಗೆ ಬಂದ 14 ಕೋಟಿ ಬೆಲೆಯ ಕೋಣ

Pinterest LinkedIn Tumblr


ಜೈಪುರ: ಈ ಕೋಣ ನೋಡಿದರೆ ಒಂದು ಕ್ಷಣ ಹೌಹಾರುವುದು ಎಷ್ಟು ಸತ್ಯವೋ ಅಷ್ಟೇ ಇದರ ಬೆಲೆಯನ್ನು ಕಂಡು ನೀವು ಬೆಚ್ಚಿ ಬೀಳುತ್ತೀರಿ.

ಸಾಮಾನ್ಯವಾಗಿ ಕೋಣ ಬೆಲೆಯನ್ನು ನಾವು ಸಾವಿರ ಅಥವಾ ಲಕ್ಷದ ಲೆಕ್ಕದಲ್ಲಿ ಕೇಳಿದ್ದೇವೆ. ಆದರೆ ರಾಜಸ್ಥಾನ ಪುಷ್ಕರ್ ಜಾತ್ರಗೆ 14 ಕೋಟಿ ರೂ. ಮೌಲ್ಯದ ಕೋಣ ಆಗಮಿಸಿ ಸುದ್ದಿಯಾಗಿದೆ.

ಭೀಮಾ ಹೆಸರಿನ ಕೋಣದ ತೂಕ 1,300 ಕೆ.ಜಿ.ಯಾಗಿದ್ದು, ರಾಜಸ್ಥಾನದ ಪುಷ್ಕರ್‌ನಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರೆಯಲ್ಲಿ ಈ ಕೋಣ ಕಾಣಿಸಿಕೊಂಡಿದೆ. ಇದನ್ನು ಕಂಡ ಜನತೆ ಒಂದು ಕ್ಷಣ ಬಾಯಿ ಮೇಲೆ ಬೆರಳಿಟ್ಟು, ಕಣ್ಣು ಮಿಟುಕಿಸದೆ ಎಮ್ಮೆಯ ಮೈಮಾಟವನ್ನೇ ನೋಡಿದ್ದಾರೆ.

ಇದು ಆರು ವರ್ಷದ ಕೋಣವಾಗಿದ್ದು, 1,300 ಕೆ.ಜಿ.ತೂಕ ಹೊಂದಿದೆ. ಈ ವಿಶಿಷ್ಟ ಕೋಣವನ್ನು ಜೋಧಪುರದಿಂದ ಮಾಲೀಕ ಜವಾಹರ್ ಲಾಲ್ ಜಂಗಿದ್, ಅವರ ಮಗ ಅರವಿಂದ್ ಜಂಗಿದ್ ಹಾಗೂ ಅವರ ಕುಟುಂಬದ ಸದಸ್ಯರು ಪುಷ್ಕರ್ ಜಾತ್ರೆಗೆ ಕರೆ ತಂದಿದ್ದಾರೆ.

ಜಾತ್ರೆಯ ಮೊದಲ ದಿನದಂದು ಕೋಣವನ್ನು ನೋಡಲು ಜನ ಮುಗಿಬಿದ್ದಿದ್ದು, ಸಾಲುಗಟ್ಟಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕೋಣದ ಮಾಲೀಕ ಜಂಗಿದ್ ಈ ಕುರಿತು ಪ್ರತಿಕ್ರಿಯಿಸಿ, ಭೀಮಾನ ನಿರ್ವಹಣೆಗೆ ಹಾಗೂ ಆಹಾರಕ್ಕಾಗಿ ಪ್ರತಿ ತಿಂಗಳು 1.5 ಲಕ್ಷ ರೂ. ಖರ್ಚು ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಅರವಿಂದ್ ಈ ಕುರಿತು ಮಾಹಿತಿ ನೀಡಿ, ಪ್ರತಿ ದಿನ ಒಂದು ಕೆ.ಜಿ.ತುಪ್ಪ, ಅರ್ಧ ಕೆ.ಜಿ. ಬೆಣ್ಣೆ, 200 ಗ್ರಾಂ.ಜೇನುತುಪ್ಪ, 25 ಲೀಟರ್ ಹಾಲು, ಒಂದು ಕಿಲೋ ಗೋಡಂಬಿ-ಬಾದಾಮಿ, ಇತ್ಯಾದಿಗಳನ್ನು ನೀಡಲಾಗುತ್ತದೆ ಎಂದು ವಿವರಿಸಿದರು.

ಜಾತ್ರೆಗೆ ಬರುವುದಕ್ಕೂ ಮೊದಲು ಈ ಕೋಣಕ್ಕೆ 14 ಕೋಟಿ ರೂ.ಗಳ ಪ್ರಸ್ತಾಪವನ್ನು ನಾವು ಸ್ವೀಕರಿಸಿದ್ದೇವೆ. ಆದರೆ ನಾವು ಭೀಮನನ್ನು ಮಾರಾಟ ಮಾಡಲು ಬಯಸುವುದಿಲ್ಲ. ಜಾತ್ರೆಯಲ್ಲಿಯೂ ಕೋಣಗಳನ್ನು ಮಾರಾಟಕ್ಕೆ ತರುವುದಿಲ್ಲ. ಬದಲಿಗೆ ಮರ‍್ರಾ ತಳಿಯನ್ನು ಸಂರಕ್ಷಿಸುವ ಹಾಗೂ ಉತ್ತೇಜಿಸುವ ಉದ್ದೇಶದಿಂದ ಮಾತ್ರ ಜಾತ್ರೆಗಳಿಗೆ ತರುತ್ತೇವೆ ಎಂದರು.

ಭೀಮನ ತೂಕವು ಕಳೆದ ವರ್ಷಕ್ಕಿಂತ ಈ ಬಾರಿ 100 ಕೆ.ಜಿ. ಹೆಚ್ಚಿದ್ದು, ಬೆಲೆ ಸಹ 2 ಕೋಟಿ ರೂ. ಹೆಚ್ಚಿಸಲಾಗಿದೆ ಎಂದರು.

Comments are closed.