ರಾಷ್ಟ್ರೀಯ

17 ದಿನಗಳ ಹೆಣ್ಣುಮಗುವನ್ನು ಜೀವಂತ ಸಮಾಧಿ ಮಾಡಿದ ಪಾಪಿ ತಂದೆ ಪೊಲೀಸರ ವಶ.

Pinterest LinkedIn Tumblr

ವಿಲ್ಲಪುರಂ: ಇದೊಂದು ಅತ್ಯಂತ ಅಮಾನವೀಯ ಘಟನೆ ತಮಿಳುನಾಡಿನ ವಿಲ್ಲಪುರಂ ಜಿಲ್ಲೆಯ ಅಥಂಡಮರುತುರ್ ಗ್ರಾಮದಲ್ಲಿ ನಡೆದಿದೆ.

29 ವರ್ಷದ ತಂದೆಯೋರ್ವ ತನ್ನ 17 ದಿನಗಳ ಹೆಣ್ಣುಮಗುವನ್ನು ಜೀವಂತವಾಗಿ ಮಣ್ಣಿನಲ್ಲಿ ಹೂತು ಹಾಕಿ ಸದ್ಯ ಪೊಲೀಸರಿಂದ ಬಂಧಿತನಾಗಿದ್ದಾನೆ. ಡಿ.ವರದರಾಜನ್​ ಬಂಧಿತ ಆರೋಪಿ. ಈತ ಥೆನ್ಪೆನ್ನೈ ನದಿ ದಂಡೆಯ ಬಳಿ ತನ್ನ ಮಗುವನ್ನು ಜೀವಂತ ಸಮಾಧಿ ಮಾಡಿದ್ದಾನೆ.

ಮಂಗಳವಾರ ರಾತ್ರಿ ತಾಯಿ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋದ ವರದರಾಜನ್​ ಮನೆಯಿಂದ ಸುಮಾರು 500 ಮೀಟರ್​ ದೂರದಲ್ಲಿರುವ ನದಿ ದಂಡೆಯ ಮೇಲೆ ಗುಂಡಿ ತೋಡಿದ್ದಾನೆ. ಬಳಿಕ ಮಗುವನ್ನು ಅದರಲ್ಲಿ ಮಲಗಿಸಿ ಮಣ್ಣು ಮುಚ್ಚಿ ಬಂದಿದ್ದಾನೆ.

ಮುಂಜಾನೆ ನಾಲ್ಕುಗಂಟೆ ವೇಳೆಗೆ ಆತನ ಪತ್ನಿ ನಿದ್ದೆಯಿಂದ ಎದ್ದು ನೋಡಿದಾಗ ಮಗು ಪಕ್ಕದಲ್ಲಿ ಇರಲಿಲ್ಲ. ಶಾಕ್​ ಆದ ಅವರು ಒಂದೇ ಸಮ ಅಳಲು ಪ್ರಾರಂಭಿಸಿದ್ದಾರೆ. ವಿಷಯ ತಿಳಿದ ಹಳ್ಳಿಯ ಜನರು ಮತ್ತು ಆಕೆಯ ಸಂಬಂಧಿಕರು ಮಗು ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆರೋಪಿ ತಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ಮಗುವನ್ನು ಹೂತ ಜಾಗವನ್ನು ತೋರಿಸಿದ್ದಾನೆ. ಬಳಿಕ ಪೊಲೀಸರು ಹಾಗೂ ಊರಿನ ಇತರ ಪ್ರಮುಖರ ಸಮ್ಮುಖದಲ್ಲಿಯೇ ಆ ಮಗುವನ್ನು ಗುಂಡಿಯಿಂದ ಹೊರತೆಗೆಯಲಾಯಿತಾದರೂ ಅದು ಬದುಕುಳಿದಿರಲಿಲ್ಲ.

ಕುಟುಂಬದವರು ಹೇಳಿದ ಪ್ರಕಾರ ಈ ಹೆಣ್ಣುಮಗು ಹುಟ್ಟಿ ಮೂರೇ ದಿನಕ್ಕೆ ಅದನ್ನು ಕೊಲ್ಲಲು ವರದರಾಜನ್​ ಮುಂದಾಗಿದ್ದನಂತೆ. ಆದರೆ ಆಗ ಹೇಗೋ ಗೊತ್ತಾಗಿ ಬದುಕುಳಿದಿತ್ತು. ತನಗೆ ಗಂಡು ಮಗುವೇ ಬೇಕು ಎಂದಿದ್ದ ವರದರಾಜನ್​ ಹೆಣ್ಣಾದರೆ ನಾನದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಪತ್ನಿಯ ಬಳಿ ಹೇಳಿದ್ದನಂತೆ. ಈ ದಂಪತಿಗೆ 15 ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಇದೇ ಮೊದಲ ಮಗುವೂ ಆಗಿತ್ತು.

ಸದ್ಯ ವರದರಾಜನ್​ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಪ್ರಾರಂಭಿಸಿದ್ದಾರೆ.

Comments are closed.