ರಾಷ್ಟ್ರೀಯ

4 ಮಹಾ ತೀರ್ಪು ಪ್ರಕಟಕ್ಕೆ ದಿನಗಣನೆ

Pinterest LinkedIn Tumblr


ಹೊಸದಿಲ್ಲಿ: ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದಲ್ಲಿ ನವೆಂಬರ್‌ 4ರಿಂದ ಮುಂದಿನ ಹತ್ತು ದಿನಗಳ ಅಂತರದಲ್ಲಿ ನಾಲ್ಕು ಮಹತ್ವದ ತೀರ್ಪುಗಳು ಹೊರಬೀಳಲಿವೆ. ಈ ತೀರ್ಪುಗಳು ಇಡೀ ದೇಶದ ಆರ್ಥಿಕ, ಸಾಮಾಜಿ, ಹಾಗೂ ರಾಜಕೀಯ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿವೆ. ಹೀಗಾಗಿ ಇಡೀ ದೇಶವನ್ನೇ ಬದಲಿಸುವ ಶಕ್ತಿ ಈ ತೀರ್ಪುಗಳಿಗಿದೆ. ಈ ಮಹತ್ವದ ತೀರ್ಪುಗಳ ಕುರಿತ ವಿವರ ಇಲ್ಲಿದೆ.

ಅಯೋಧ್ಯೆ ವಿವಾದ:
ಹಲವು ದಶಕಗಳಿಂದ ನಡೆಯುತ್ತಿರುವ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣ ಭೂಮಿ ವಿವಾದ ಪ್ರಕರಣ ಪ್ರಮುಖವಾದುದು. ಈ ಪ್ರಕರಣದ ತೀರ್ಪಿಗಾಗಿ ಇಡೀ ದೇಶವೇ ಕಾದು ಕುಳಿತಿದೆ. ಇಗಾಗಲೇ ಸುರ್ಪೀಂ ಕೋರ್ಟ್‌ ಸುತ್ತಲೂ ಸರ್ಪಗಾವಲು ಏರ್ಪಡಿಸಲಾಗಿದೆ. ಪ್ರಕರಣ ಕುರಿತಂತೆ ಆಗಸ್ಟ್‌ 6ರಿಂದ 40 ದಿನಗಳ ಸತತ ವಿಚಾರಣೆ ನಡೆಸಿ ಅಂತ್ಯಗೊಳಿ ತೀರ್ಪನ್ನು ಕಾಯ್ದಿರಿಸಲಾಗಿದೆ. ನವೆಂಬರ್‌ 17ಕ್ಕೆ ತೀರ್ಪು ಪ್ರಕಟವಾಗುವ ಸಾಧ್ಯತೆಯಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪಂಚಸದಸ್ಯ ಪೀಠ ಅಯೋಧ್ಯೆ ಪ್ರಕರಣವನ್ನು ವಿಚಾರಣೆ ನಡೆಸಿದೆ. ಪೀಠವು ನ್ಯಾಯಮೂರ್ತಿಗಳಾದ ಎಸ್‌.ಎ. ಬೋಬ್ಡೆ (ಮುಂದಿನ ಮುಖ್ಯ ನ್ಯಾಯಮೂರ್ತಿ), ಬಿ ವೈ ಚಂದ್ರಚೂಡ್‌, ಅಶೋಕ್‌ ಭೂಷಣ್ ಮತ್ತು ಎಸ್‌. ಎ. ನಜೀರ್‌ ಅವರನ್ನು ಒಳಗೊಂಡಿದೆ.

ರಫೇಲ್‌ ಯುದ್ಧವಿಮಾನ ಖರೀದಿ ಪ್ರಕರಣ:
ರಫೇಲ್‌ಗೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿ 2018 ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ವಕೀಲರಾದ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕೋರ್ಟ್ ಮತ್ತೆ ಕೈಗೆತ್ತಿಕೊಂಡಿತ್ತು. ಚೌಕಿದಾರ್‌ ಚೋರ್‌ ಹೈ ಎಂದು ಸುಪ್ರೀಂಕೋರ್ಟ್‌ ಕೂಡ ಅಭಿಪ್ರಾಯಪಟ್ಟಿದೆ ಎಂದಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ನ್ಯಾಯಾಂಗ ನಿಂದನೆ ಪ್ರಕರಣ ಹೂಡಿದ್ದರು. ಸಿಜೆಐ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತ್ತು. ತಮ್ಮ ಹೇಳಿಕೆ ಕುರಿತು ರಾಹುಲ್‌ ಗಾಂಧಿ ಸುಪ್ರೀಂಕೋರ್ಟ್‌ನಲ್ಲಿ ಕ್ಷಮೆಯಾಚಿಸಿದ್ದರು. ಹಾಗೂ ಕಳೆದ ಮೇ 10ರಂದು ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು.

ಆರ್‌ಟಿಐ ವ್ಯಾಪ್ತಿಗೆ ಸುಪ್ರೀಂ ಮತ್ತು ಸಿಜೆಐ ಸೇರ್ಪಡೆ ಪ್ರಕರಣ:
ಸರ್ವೋಚ್ಚ ನ್ಯಾಯಾಲಯ ಮತ್ತು ಮುಖ್ಯ ನ್ಯಾಯಮೂರ್ತಿಗಳನ್ನು (ಸಿಜೆಐ) ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ತರುವ ಕುರಿತ ಪ್ರಕರಣ ತೀರ್ಪನ್ನು ಏಪ್ರಿಲ್‌ 4 ರಂದು ಕಾಯ್ದಿರಿಸಿತ್ತು. ಈ ತೀರ್ಪು ಕೂಡ ಶೀಘ್ರದಲ್ಲೇ ಪ್ರಕಟವಾಗಲಿದೆ.

ಸರ್ವೋಚ್ಚ ನ್ಯಾಯಾಲಯ ಮತ್ತು ಮುಖ್ಯ ನ್ಯಾಯಮೂರ್ತಿಗಳು ಸಾರ್ವಜನಿಕ ಸ್ವಾಮ್ಯಕ್ಕೆ ಸೇರಲಿದ್ದು, ಆರ್‌ಟಿಐ ವ್ಯಾಪ್ತಿಗೂ ಸೇರುತ್ತಾರೆ ಎಂದು ದೆಹಲಿ ಹೈಕೋರ್ಟ್‌ ಆದೇಶ ನೀಡಿತ್ತು. ಆದರೆ, ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಪ್ರಧಾನ ಕಾರ್ಯದರ್ಶಿ 2010 ರಲ್ಲಿ ಸುಪ್ರೀಂ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್‌ ನೇತೃತ್ವದ ಪಂಚ ಸದಸ್ಯ ಪೀಠ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು.

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ ಪ್ರಕರಣ:
ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಲು ಮಹಿಳೆಯರಿಗಿದ್ದ ನಿರ್ಬಂಧವನ್ನು ತೆರವುಗೊಳಿಸಿ ಸುಪ್ರೀಂ ಕೋರ್ಟ್‌ 2018ರ ಸೆಪ್ಟೆಂಬರ್‌ನಲ್ಲಿ ಐತಿಹಾಸಿಕ ತೀರ್ಪು ನೀಡಿತ್ತು. ಸಂವಿಧಾನದ 14ನೇ ವಿಧಿಯಲ್ಲಿ ಸಮಾನತೆ ಪ್ರತಿಪಾದಿಸಲಾಗಿದ್ದು, 26ನೇ ವಿಧಿಯಲ್ಲಿ ಪುರುಷರ ಜತೆಗೆ ಮಹಿಳೆಗೂ ಧಾರ್ವಿುಕ ಆಚರಣೆಯ ಹಕ್ಕು ನೀಡಲಾಗಿದೆ. ಹಿಂದು ಧರ್ಮದಲ್ಲಿ ಮಹಿಳೆಯರಿಗೆ ಎಲ್ಲಿಯು ಧಾರ್ವಿುಕ ಬಹಿಷ್ಕಾರಕ್ಕೆ ಅವಕಾಶವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಶುಕ್ರವಾರ 4:1 ರ ಅನುಪಾತದಲ್ಲಿ ತೀರ್ಪು ನೀಡಿತ್ತು.

ಆದರೆ, ಸುಪ್ರೀಂಕೋರ್ಟ್ ಆದೇಶದಿಂದ ಶಬರಿಮಲೆ ಭಕ್ತರ ನಂಬಿಕೆಗೆ ಘಾಸಿಯಾಗಿದೆ ಎಂದು ಶಬರಿಮಲೆ ದೇವಸ್ಥಾನ ಆಡಳಿತ ಮಂಡಳಿ, ಸುಪ್ರೀಂಕೋರ್ಟ್ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪಂಚಸದಸ್ಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿದ್ದು, ಫೆಬ್ರವರಿ 6ರಂದು ತೀರ್ಪನ್ನು ಕಾಯ್ದಿರಿಸಿತ್ತು.

Comments are closed.