ಗಲ್ಫ್

ಸೌದಿ ಪ್ರವಾಸ: ಪಾಕ್‌ ನಿರ್ಬಂಧಕ್ಕೆ ‘ಕ್ಯಾರ್‌’ ಮಾಡದೆ ಸುತ್ತಿ ಬಳಸಿ ಹೋದ ಪ್ರಧಾನಿ ಮೋದಿ

Pinterest LinkedIn Tumblr


ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾ ಪ್ರವಾಸಕ್ಕೆ ಲಾಂಗ್‌ ರೂಟ್‌ ಅನಿವಾರ್ಯವಾಗಿದೆ. ಪಾಕಿಸ್ತಾನ ತನ್ನ ವೈಮಾನಿಕ ಮಾರ್ಗವನ್ನು ಬಳಸಲು ಅನುಮತಿ ನೀಡದ ಹಿನ್ನೆಲೆ ದಿಲ್ಲಿಯಿಂದ ಮುಂಬಯಿ ಮೂಲಕ ಅರೇಬಿಯನ್‌ ಸಮುದ್ರವನ್ನು ದಾಟಿ ರಿಯಾದ್‌ಗೆ ಪ್ರಯಾಣ ಬೆಳೆಸಬೇಕಿದೆ. ಬೋಯಿಂಗ್‌ 747 ವಿಮಾನದಲ್ಲಿ ಪ್ರಧಾನಿ ಮೋದಿ ಸೌದಿಗೆ ತೆರಳಲಿದ್ದಾರೆ.

12 ವರ್ಷಗಳ ಬಳಿಕ ಅರೇಬಿಯನ್‌ ಸಮುದ್ರದಲ್ಲಿ ಕ್ಯಾರ್‌ ಚಂಡಮಾರುತ ಅಬ್ಬರಿಸುತ್ತಿದೆ. ಈ ನಡುವೆಯೇ ಪಿಎಂ ಮೋದಿ ಪ್ರಯಾಣ ಬೆಳೆಸಿದ್ದು, ದೀರ್ಘಾವಧಿ ಮಾರ್ಗದಲ್ಲಿ ಪ್ರಯಾಣಿಸುತ್ತಿರುವ ಕಾರಣ ರಿಯಾದ್‌ಗೆ ತಲುಪಲು 45 ನಿಮಿಷ ಹೆಚ್ಚಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿವಿಐಪಿ ವಿಮಾನ ಪಾಕಿಸ್ತಾನದ ವಾಯು ಮಾರ್ಗವಾಗಿ ಸೌದಿಗೆ ಪ್ರಯಾಣಿಸಲು ಅನುಮತಿಯನ್ನು ಭಾನುವಾರ ನಿರಾಕರಿಸಿತು.

ರಿಯಾದ್‌ನಲ್ಲಿ ಪ್ರಧಾನಿ ಮೋದಿ ಸೌದಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮನ್‌ ಅಲ್‌ ಸೌದ್‌ ಅವರನ್ನು ಮಂಗಳವಾರ ಭೇಟಿ ಮಾಡಲಿದ್ದಾರೆ. ಸೌದಿ ಅರೇಬಿಯಾದ ಸಾವರಿನ್‌ ವೆಲ್ತ್‌ ಫಂಡ್‌ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭವಿಷ್ಯದ ಹೂಡಿಕೆಗಳ ಬಗ್ಗೆ ಪಿಎಂ ಮೋದಿ ಮಾತನಾಡಲಿದ್ದಾರೆ.

ಕಳೆದ ಫೆಬ್ರವರಿಯಿಂದ ಪಾಕಿಸ್ತಾನ ವಾಯು ಮಾರ್ಗ ಬಳಕೆಗೆ ನಿರ್ಬಂಧ ಹೇರಿರುವುದರಿಂದ ಭಾರತದ ವಿವಿಐಪಿ ವಿಮಾನಗಳು ವಿದೇಶ ಸಂಚಾರಕ್ಕೆ ಅನ್ಯ ಮಾರ್ಗವನ್ನೇ ಅವಲಂಬಿಸಿವೆ. ಬಾಲಾಕೋಟ್‌ ಮೇಲೆ ಭಾರತೀಯ ಸೇನೆ ಸರ್ಜಿಕಲ್‌ ದಾಳಿ ನಡೆಸಿದ ನಂತರ ಪಾಕಿಸ್ತಾನ ತನ್ನ ವಾಯು ಮಾರ್ಗವನ್ನು ಬಂಧ್‌ ಮಾಡಿತ್ತು. 138 ದಿನಗಳ ಬಳಿಕ ಜುಲೈ 16ಕ್ಕೆ ಮತ್ತೆ ವಾಯು ಮಾರ್ಗವನ್ನು ಕಮರ್ಷಿಯಲ್‌ ವಿಮಾನಗಳ ಸಂಚಾರಕ್ಕೆ ತೆರವುಗೊಳಿಸಿತ್ತು.

ಸೆಪ್ಟಂಬರ್‌ ತಿಂಗಳಲ್ಲಿ ಅಮೆರಿಕದಲ್ಲಿ ನಡೆದ ಹೌದಿ-ಮೋದಿ ಕಾರ್ಯಕ್ರಮಕ್ಕೆ ಭೇಟಿ ನೀಡಲು ಪಾಕಿಸ್ತಾನದ ವಾಯು ಮಾರ್ಗವನ್ನು ಬಳಸಲು ಭಾರತ ಅನುಮತಿ ಕೇಳಿತ್ತು. ಅದೇ ತಿಂಗಳು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಯೂರೋಪ್‌ ಪ್ರವಾಸಕ್ಕೆ ದೀರ್ಘಾವದಿ ಮಾರ್ಗದಲ್ಲೇ ಪ್ರಯಾಣಿಸಿದ್ದರು. ಜೂನ್‌ ತಿಂಗಳಲ್ಲಿ ಪಿಎಂ ಮೋದಿ ಬಿಶಕ್‌ಗೆ ಪ್ರಯಾಣಿಸಲು ಲಾಂಗರ್‌ ರೂಟ್‌ ಹಿಡಿದಿದ್ದರು.

Comments are closed.