ರಾಷ್ಟ್ರೀಯ

600 ಅಡಿ ಆಳದ ಬೋರ್ ವೆಲ್‌ಗೆ ಬಿದ್ದ ಮಗುವಿನ ರಕ್ಷಣೆಗೆ ಹರಸಾಹಸ

Pinterest LinkedIn Tumblr

ಚೆನ್ನೈ: ತಮಿಳುನಾಡಿನ ನಡುಕ್ಕಟುಪಟ್ಟಿ ಗ್ರಾಮದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗುವೊಂದು ಆಕಸ್ಮಿಕವಾಗಿ ಬೋರ್​​ವೆಲ್​ ಗುಂಡಿಗೆ ಬಿದ್ದಿದ್ದು ರಕ್ಷಣಾ ಕಾರ್ಯ ಸತತ 16 ಗಂಟೆಗಳಿಂದ ಮುಂದುವರಿದಿದೆ. ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಸಿಬ್ಬಂದಿ ನಿನ್ನೆ ಸಾಯಂಕಾಲದಿಂದ ಮಗುವನ್ನು ಸುರಕ್ಷಿತವಾಗಿ ಹೊರತೆಗೆಯಲು ಹರಸಾಹಸಪಡುತ್ತಿದ್ದಾರೆ.

ಸುಜಿತ್ ಎಂಬ 2 ವರ್ಷದ ಮಗು ತನ್ನ ಮನೆಯ ಮುಂದಿರುವ 600 ಅಡಿ ಆಳದ ಬೋರ್ ವೆಲ್ ಗೆ ಬಿದ್ದಿದ್ದು ನೆರೆಹೊರೆಯ ಗ್ರಾಮಗಳಿಂದ ಸಾವಿರಕ್ಕೂ ಹೆಚ್ಚು ಜನರು ಸೇರಿ ಮಗು ಸಾವನ್ನು ಗೆದ್ದು ಬದುಕಿ ಮೇಲೆ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಸಿಬ್ಬಂದಿಗೆ ಕಾರ್ಯದಲ್ಲಿ ತಿರುಚಿ, ಕೊಯಂಬತ್ತೂರು, ನಮಕ್ಕಲ್ ಮತ್ತು ಮದುರೈಯ ಹಲವು ಸರ್ಕಾರೇತರ ಸಂಘಟನೆಗಳು ಕೂಡ ಸಾಥ್ ನೀಡುತ್ತಿದ್ದಾರೆ. ರಕ್ಷಣಾ ಕಾರ್ಯ ನಡೆಸುತ್ತಿರುವ ವೇಳೆ ಮಗು ಮೂರು ಬಾರಿ ಹಗ್ಗಕ್ಕೆ ಬಂದಿದ್ದರೂ ಮೇಲೆತ್ತಲು ಸಾಧ್ಯವಾಗಿಲ್ಲ.
ನಿನ್ನೆ ಸಾಯಂಕಾಲ ಮನೆಯ ಮುಂದೆ ಆಟವಾಡುತ್ತಿದ್ದ ಮಗು ಕಾಣೆಯಾದಾಗಲೇ ಪೋಷಕರಿಗೆ ಮಗು ಬೋರ್ ವೆಲ್ ಗೆ ಬಿದ್ದಿದೆ ಎಂದು ಗೊತ್ತಾಗಿರುವುದು. ಇದನ್ನು 5 ವರ್ಷಗಳ ಹಿಂದೆ ಕೊರೆಯಲಾಗಿತ್ತು. ಈ ಮಧ್ಯೆ 10 ಅಡಿ ಆಳದಲ್ಲಿ ಬಂಡೆ ಸಿಕ್ಕಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗಿತ್ತು. ರಾತ್ರಿಯಿಡೀ ಕಾರ್ಯಾಚರಣೆ ಮುಂದುವರೆಸಿರುವ ಸಿಬ್ಬಂದಿ, ಬಾಲಕನ ರಕ್ಷಣೆಗಾಗಿ ಹರಸಾಹಸ ಪಡುತ್ತಿದ್ದಾರೆ.

ಆರಂಭದಲ್ಲಿ ರಕ್ಷಣಾ ಸಿಬ್ಬಂದಿಗೆ ಮಗು 27 ಅಡಿ ಆಳದಲ್ಲಿ ಸಿಕ್ಕಿದ್ದನಂತೆ. ಆದರೆ ಮಣ್ಣು ಕುಸಿಯುತ್ತಾ ಹೋಗಿ, ಮಣ್ಣು ಒದ್ದೆಯಾಗಿದ್ದರಿಂದ 70 ಅಡಿ ಆಳಕ್ಕೆ ಮಗು ಜಾರಿ ಹೋದನು. ಈಗಾಗಲೇ 68 ಅಡಿ ಆಳ ಕೊರೆದಿದ್ದೇವೆ ಎನ್ನುತ್ತಾರೆ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್.

Comments are closed.