ರಾಷ್ಟ್ರೀಯ

ಪ್ರಿಯಾಂಕಾ ಗಾಂಧಿ ಮೊದಲ ಪರೀಕ್ಷೆ ಪಾಸ್?

Pinterest LinkedIn Tumblr


ಲಕ್ನೋ(ಅ. 25): ಎರಡು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು 53 ಕ್ಷೇತ್ರಗಳ ಉಪಚುನಾವಣೆ ಭವಿಷ್ಯ ರಾಜಕಾರಣ ಹಲವು ಮಗ್ಗುಲು ಮತ್ತು ಸಾಧ್ಯಾಸಾಧ್ಯತೆಗಳನ್ನ ತೆರೆದಿಟ್ಟಿದೆ. ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಬಹುಮತವಾಗಲೀ, ನಂಬರ್ ಒನ್ ಸ್ಥಾನವನ್ನಾಗಲೀ ಪಡೆದಿಲ್ಲವಾದರೂ ಗಮನಾರ್ಹ ರೀತಿಯಲ್ಲಿ ತನ್ನ ಬಲವೃದ್ಧಿಸಿಕೊಂಡಿರುವುದಂತೂ ನಿಜ. ಉಪಚುನಾವಣೆ ವಿಚಾರದಲ್ಲೂ ಇದು ಅನ್ವಯವಾಗುತ್ತದೆ.

ತಾನು ಆಡಳಿತದಲ್ಲಿಲ್ಲದ ಕೇರಳ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ತನ್ನ ವರ್ಚಸ್ಸು ಹೆಚ್ಚಿಸಿಕೊಂಡಿರುವ ಸೂಚನೆ ಕಂಡುಬಂದಿದೆ. ಕೇರಳದಲ್ಲಿ ಎಲ್​ಡಿಎಫ್ ಸರ್ಕಾರ ಇದ್ದರೂ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 3 ಸ್ಥಾನಗಳನ್ನ ಗೆದ್ದಿದೆ. ಬಿಜೆಪಿ ಭದ್ರಕೋಟೆ ಎನಿಸಿರುವ ಗುಜರಾತ್​ನಲ್ಲಿ ಕಾಂಗ್ರೆಸ್ ಆರರಲ್ಲಿ ಮೂರನ್ನು ಗೆದ್ದು ಬೀಗಿದೆ. ಆದರೆ, ಉತ್ತರ ಪ್ರದೇಶದ ಉಪಚುನಾವಣೆ ಫಲಿತಾಂಶ ಕೆಲವಾರು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ.

ಉತ್ತರ ಪ್ರದೇಶದಲ್ಲಿ 11 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಒಂದರಲ್ಲೂ ಗೆದ್ದಿಲ್ಲ. ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ 8 ಸ್ಥಾನಗಳನ್ನ ಗೆದ್ದಿದೆ. ಎಸ್​ಪಿ ಎರಡರಲ್ಲಿ ಮತ್ತು ಬಿಎಸ್​ಪಿ ಒಂದರಲ್ಲಿ ಗೆಲುವು ಸಾಧಿಸಿವೆ. ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ. ಆದರೂ ಆ ಪಕ್ಷಕ್ಕೆ ಹಲವು ಸಕಾರಾತ್ಮಕವಾಗುವ ಅಂಶಗಳಿವೆ. ಬಿಜೆಪಿ ಹಾಗೂ ಆ ರಾಜ್ಯದ ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್ ಸಣ್ಣದಾಗಿ ಎಚ್ಚರಿಕೆಯ ಕರೆಗಂಟೆ ಒತ್ತಿದೆ. ಕಾಂಗ್ರೆಸ್​ಗೆ ಭವಿಷ್ಯದಲ್ಲಿ ತೋರಿಸಬಲ್ಲ ಶಕ್ತಿಯನ್ನು ಪ್ರಿಯಾಂಕಾ ಗಾಂಧಿ ತೋರ್ಪಡಿಸಿದ್ದಾರೆ.

ಮೊದಲಿಗೆ, ಕಾಂಗ್ರೆಸ್ ಪಕ್ಷ ಉ.ಪ್ರ. ಉಪಚುನಾವಣೆಯಲ್ಲಿ ಸೊನ್ನೆ ಸುತ್ತಿದರೂ ಅಷ್ಟೊಂದು ಬೀಗಿಕೊಳ್ಳುವಂಥದ್ದು ಏನಿದೆ? ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ ಪ್ರಮಾಣ ದ್ವಿಗುಣಗೊಂಡಿರುವುದು ಇದಕ್ಕೆ ಮುಖ್ಯ ಕಾರಣ. 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳಿಕೆ ಪ್ರಮಾಣ ಕೇವಲ ಶೇ. 6.25 ಮಾತ್ರ ಇತ್ತು. ಆದರೆ, 11 ಕ್ಷೇತ್ರಗಳ ಉಪಚುನಾವಣೆಯಲ್ಲಿ ಅದರ ಪ್ರಮಾಣ ಶೇ. 12.80ಗೆ ಹೆಚ್ಚಾಗಿದೆ. ಅಂದರೆ ಶೇ. 100ರಷ್ಟು ಹೆಚ್ಚಳವಾಗಿದೆ. ಇದೇ ವೇಳೆ, ಬಿಜೆಪಿಯ ಮತಪ್ರಮಾಣ ಶೇ. 14ರಷ್ಟು ಕುಸಿದಿರುವುದು ಇಲ್ಲಿ ಗಮನಾರ್ಹ. ಬಿಜೆಪಿ ಮತ್ತು ಬಿಎಸ್​ಪಿ ಪಕ್ಷಗಳು ತಲಾ ಒಂದೊಂದು ಸ್ಥಾನಗಳನ್ನ ಕಳೆದುಕೊಂಡಿವೆ. ಕಾಂಗ್ರೆಸ್ ಪಕ್ಷ ಗಂಗೋಹ ಕ್ಷೇತ್ರದಲ್ಲಿ ಕೇವಲ 5 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದೆ. ಈ ಕ್ಷೇತ್ರದಲ್ಲಿ ಆರಂಭಿಕ ಸುತ್ತುಗಳಲ್ಲಿ ಕಾಂಗ್ರೆಸ್ ಮುನ್ನಡೆ ಕೂಡ ಸಾಧಿಸಿತ್ತು.

ಪ್ರಿಯಾಂಕಾ ಗಾಂಧಿ ಅವರಿಗೆ ಕಾಂಗ್ರೆಸ್​ನ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನದ ಜೊತೆಗೆ ಉತ್ತರ ಪ್ರದೇಶದ ಉಸ್ತುವಾರಿಯ ಹೊಣೆಯನ್ನೂ ಹೆಗಲಿಗೇರಿಸಲಾಗಿತ್ತು. ಬಿಜೆಪಿ ಪಕ್ಷದ ಓಟಕ್ಕೆ ಬ್ರೇಕ್ ಹಾಕಲು ಅವರು ಸಕಲ ಪ್ರಯತ್ನ ಮಾಡಿದರು. ಒಂದು ಕಾಲದಲ್ಲಿ ಕಾಂಗ್ರೆಸ್ ಪಾಲಿಗೆ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಮತ್ತೆ ನೆಲೆ ತಂದುಕೊಡುವ ಹೆಗ್ಗುರಿ ಪ್ರಿಯಾಂಕಾ ಗಾಂಧಿ ಅವರದ್ದಾಗಿದೆ. ಕೇಂದ್ರದಲ್ಲಿ ಏಕಾಂಗಿಯಾಗಿ ಸರ್ಕಾರ ರಚಿಸಲು ಸಾಧ್ಯವಾಗಬೇಕಾದರೆ ಉತ್ತರ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸುವುದು ಬಹಳ ಮುಖ್ಯ ಎನ್ನುವ ಅರಿವು ಕಾಂಗ್ರೆಸ್​ಗೆ ಇದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಉಪಚುನಾವಣೆಯು ಕಾಂಗ್ರೆಸ್ ಪಾಲಿಗೆ ಒಂದು ಯಶಸ್ವಿ ಕಿರು ಹೆಜ್ಜೆಯಾಗಿದೆ. ಈ ಪುಟ್ಟ ಹೆಜ್ಜೆಯು ಮುಂದಿನ ದಿನಗಳಲ್ಲಿ ದೊಡ್ಡ ಜಿಗಿತಕ್ಕೆ ಆಧಾರ ಒದಗಿಸುವ ಸಾಧ್ಯತೆ ಇಲ್ಲದಿಲ್ಲ.

“ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತಪ್ರಮಾಣ ದ್ವಿಗುಣಗೊಂಡಿದೆ. ಇದು ಬದಲಾವಣೆಯ ಆರಂಭವಾಗಿದೆ. ಉತ್ತರ ಪ್ರದೇಶದ ಜನರ ತೀರ್ಪನ್ನು ಕಾಂಗ್ರೆಸ್ ಗೌರವಿಸುತ್ತದೆ. ಚುನಾವಣೆಯಲ್ಲಿ ಶ್ರಮ ವಹಿಸಿದ ಎಲ್ಲಾ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆ ನನ್ನ ಧನ್ಯವಾದಗಳು” ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಕಮಿಟಿಯ ಮುಖ್ಯಸ್ಥ ಅಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಇದು ಎಲ್ಲೋ ಒಂದೆಡೆ ಉತ್ತರ ಪ್ರದೇಶದ ಜನರಿಗೆ ಕಾಂಗ್ರೆಸ್ ಮತ್ತೊಮ್ಮೆ ಪ್ರಬಲ ಶಕ್ತಿಯಾಗಿ ಕಾಣಿಸತೊಡಗಿರಬಹುದಾ ಎಂದನಿಸುತ್ತದೆ.

Comments are closed.