ರಾಷ್ಟ್ರೀಯ

ವಿದ್ಯಾರ್ಥಿನಿಯನ್ನು ಸಜೀವವಾಗಿ ಸುಟ್ಟುಹಾಕಿದ 16 ಮಂದಿ ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡಿದ ನ್ಯಾಯಾಲಯ

Pinterest LinkedIn Tumblr

ಬಾಂಗ್ಲಾದೇಶ: ದೇಶದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದ 19 ವರ್ಷದ ವಿದ್ಯಾರ್ಥಿನಿಯನ್ನು ಸಜೀವವಾಗಿ ಸುಟ್ಟುಹಾಕಿದ ಪ್ರಕರಣದಲ್ಲಿ 16 ಮಂದಿಗೆ ಬಾಂಗ್ಲಾದೇಶದ ನ್ಯಾಯಾಲಯವೊಂದು ಗಲ್ಲುಶಿಕ್ಷೆ ವಿಧಿಸಿದೆ.

ಇಸ್ಲಾಮಿಕ್ ಶಾಲೆಯೊಂದರ ವಿದ್ಯಾರ್ಥಿನಿಯಾಗಿದ್ದ 19 ವರ್ಷದ ನುಸ್ರತ್ ಜಹಾನ್ ರಫಿ ಎಂಬಾಕೆ ತನ್ನ ಮುಖ್ಯೋಪಾಧ್ಯಾಯರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಳು. ಈ ಆರೋಪವನ್ನು ಹಿಂಪಡೆಯಲು ನಿರಾಕರಿಸಿದ್ದ ಕಾರಣಕ್ಕೆ ದುಷ್ಕರ್ಮಿಗಳು ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು.

ಪೊಲೀಸರಿಗೆ ನೀಡಿದ್ದ ದೂರನ್ನು ವಾಪಸ್ ಪಡೆದುಕೊಳ್ಳುವಂತೆ ಮುಖ್ಯೋಪಾಧ್ಯಾಯನ ಬೆಂಬಲಿಗರು ಆಕೆಯ ಮೇಲೆ ದಾಳಿ ನಡೆಸಿದ್ದರು. ಆಕೆಯನ್ನು ಶಾಲೆಯ ಮಹಡಿಗೆ ಎಳೆದೊಯ್ದಿದ್ದರು. ಆಗಲೂ ಆಕೆ ಅವರ ಬೆದರಿಕೆಗೆ ಮಣಿಯದೆ ಇದ್ದಾಗ ಆಕೆಯ ಕೈಕಾಲುಗಳನ್ನು ಕಟ್ಟಿಹಾಕಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ ಹೃದಯ ವಿದ್ರಾವಕ ಘಟನೆ ನಡೆದಿತ್ತು.

ವಿಶೇಷ ಮಹಿಳಾ ಮತ್ತು ಮಕ್ಕಳ ನ್ಯಾಯಮಂಡಳಿ ಗುರುವಾರ ಈ ತೀರ್ಪು ನೀಡಿದೆ. ಬಾಂಗ್ಲಾದೇಶದಲ್ಲಿ ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂಬುದನ್ನು ಈ ಆದೇಶ ಸಾಬೀತುಪಡಿಸಿದೆ. ಇದು ನ್ಯಾಯಾಂಗದ ಮಹತ್ವದ ಸಾಧನೆ ಎಂದು ಮುಖ್ಯ ಪ್ರಾಸಿಕ್ಯೂಟರ್ ಹಫೀಜ್ ಅಹ್ಮದ್ ಹೇಳಿದರು.

ದೇಹದ ಶೇ 80ರಷ್ಟು ಸುಟ್ಟಗಾಯಗಳಿಗೆ ಒಳಗಾದ ನುಸ್ರತ್ ಘಟನೆ ನಡೆದು ಐದು ದಿನಗಳ ಬಳಿಕ ಏಪ್ರಿಲ್ 10ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಆಕೆಯ ಸಾವು ಬಾಂಗ್ಲಾದೇಶದಾದ್ಯಂತ ಭಾರಿ ಆಕ್ರೋಶಕ್ಕೆ ಒಳಗಾಗಿತ್ತು. ಅಲ್ಲದೆ ದೇಶದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳ ಬಗ್ಗೆ ಸಹ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ಯುವತಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಸೊನಗಾಜಿ ಇಸ್ಲಾಮಿಯಾ ಸೀನಿಯರ್ ಫಾಜಿಲ್ ಮದರಸಾದ ಮುಖ್ಯ ಶಿಕ್ಷಕ ಸಿರಾಜ್ ಉದ್ ದೌಲಾ ಕೂಡ ಗಲ್ಲುಶಿಕ್ಷೆಗೆ ಗುರಿಯಾದ 16 ಮಂದಿಯಲ್ಲಿ ಸೇರಿದ್ದಾನೆ. ಆತ ಕೊಲೆ ಪ್ರಕರಣದಲ್ಲಿ ತಾನು ಭಾಗಿಯಾಗಿಲ್ಲ ಎಂದು ವಾದಿಸಿದ್ದಾನೆ. 12 ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಮಾರ್ಚ್‌ನಲ್ಲಿ ದೌಲಾ ವಿರುದ್ಧ ದೂರು ನೀಡಿದ್ದ ಯುವತಿ, ತನ್ನನ್ನು ಕಚೇರಿಗೆ ಕರೆಸಿದ್ದ ಶಿಕ್ಷಕ ಅಸಭ್ಯವಾಗಿ ವರ್ತಿಸಿದ್ದ ಎಂದು ಆರೋಪಿಸಿದ್ದಳು. ಬಳಿಕ ದೌಲಾನನ್ನು ಬಂಧಿಸಲಾಗಿತ್ತು. ಜೈಲಿನಿಂದಲೇ ದೌಲಾ ಆಕೆಯನ್ನು ಸಾಯಿಸುವಂತೆ ಬೆಂಬಲಿಗರಿಗೆ ಸೂಚನೆ ನೀಡಿದ್ದ. ಆತನ ಬೆಂಬಲಿಗರಲ್ಲಿ ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ಇಬ್ಬರು ರಾಜಕೀಯ ಮುಖಂಡರೂ ಇದ್ದರು.

ದೌಲಾನ ಆದೇಶದಂತೆ ನುಸ್ರತ್‌ಳನ್ನು ಬಟ್ಟೆಯಿಂದ ಕಟ್ಟಿ ಬೆಂಕಿ ಹಚ್ಚಿದ್ದರು. ಅದು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಆದರೆ ಆಕೆ ಮಹಡಿ ಮೇಲಿಂದ ಕೆಳಕ್ಕೆ ಓಡಿಬರುವಲ್ಲಿ ಯಶಸ್ವಿಯಾಗಿದ್ದಳು. ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ಕೆಲವು ದಾಳಿಕೋರರನ್ನು ಗುರುತಿಸಿದ್ದ ಆಕೆ, ಶಿಕ್ಷಕ ತನ್ನನ್ನು ಸ್ಪರ್ಶಿಸಿದ್ದ. ಆ ಕಾರಣಕ್ಕಾಗಿಯೇ ತನಗೆ ಹೀಗೆ ಮಾಡಲಾಗಿದೆ. ನಾನು ಕೊನೆಯುಸಿರು ಇರುವವರೆಗೂ ಹೋರಾಡುತ್ತೇನೆ ಎಂದು ಹೇಳಿದ್ದು ವಿಡಿಯೋದಲ್ಲಿ ದಾಖಲಾಗಿತ್ತು.

Comments are closed.