ರಾಷ್ಟ್ರೀಯ

BSNL- MTNL ವಿಲೀನಕ್ಕೆ ನಿರ್ಧರಿಸಿದ ಕೇಂದ್ರ ಸಂಪುಟ ಸಮಿತಿ ಸಭೆ

Pinterest LinkedIn Tumblr

ಪ್ರಮುಖ ನಿರ್ಧಾರವೊಂದರಲ್ಲಿ ನಷ್ಟದಲ್ಲಿರುವ ಸರಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿಗಳಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಮತ್ತು ಮಹಾನಗರ್ ಟೆಲಿಕಾಂ ಲಿಮಿಟೆಡ್ (ಎಮ್‌ಟಿಎನ್‌ಎಲ್) ವಿಲೀನಕ್ಕೆ ಕೇಂದ್ರ ಸರಕಾರ ನಿರ್ಧರಿಸಿದೆ. ಈ ಸಂಬಂಧ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಇದರೊಂದಿಗೆ ಎರಡೂ ಕಂಪೆನಿಗಳ ಪುನರುಜ್ಜೀವನಕ್ಕೆ 29,937 ಕೋಟಿ ರೂ.ಗಳ ಪ್ಯಾಕೇಜ್ ಅನ್ನು ನೀಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಈ ವಿಚಾರವನ್ನು ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರು ಸಚಿವ ಸಂಪುಟ ಸಭೆ ಬಳಿಕ ತಿಳಿಸಿದ್ದಾರೆ.

ಕಂಪೆನಿಗಳ ಅಭಿವೃದ್ಧಿಗಾಗಿ ಘೋಷಿಸುವ ಪ್ಯಾಕೇಜ್‌ನಲ್ಲಿ 15 ಸಾವಿರ ಕೋಟಿ ರೂ.ಗಳನ್ನು ಸೋವರಿನ್ ಬಾಂಡ್ಗಳ ಮೂಲಕ ಮತ್ತು 38 ಸಾವಿರ ಕೋಟಿ ರೂ.ಗಳನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಆಸ್ತಿ ವಿಲೇವಾರಿ ಮೂಲಕ ಸಂಗ್ರಹಿಸಲು ಯೋಜಿಸಲಾಗಿದೆ.

ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಯನನೂ ಜಾರಿಗೊಳಿಸಲಾಗಿದೆ. ಈ ಮೂಲಕ ಹೆಚ್ಚಿನ ವೆಚ್ಚವನ್ನು ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ. ಬಿಎಸ್‌ಎನ್‌ಎಲ್‌ನಲ್ಲಿ 1.63 ಲಕ್ಷ ಮಂದಿ ನೌಕರರಿದ್ದರೆ, ಎಂಟಿಎನ್‌ಎಲ್‌ನಲ್ಲಿ 22 ಸಾವಿರ ಮಂದಿ ನೌಕರರಿದ್ದಾರೆ.

ಮಂಗಳವಾರ ಪ್ರಧಾನಿ ಕಾರ್ಯಾಲಯದ ಮಧ್ಯಪ್ರವೇಶದ ಬಳಿಕ ಟೆಲಿಕಾಂ ಸಚಿವಾಲಯ, ಸಂಪುಟ ಸಮಿತಿ ಸಭೆಗೆ ವಿಲೀನ ಕುರಿತ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಇದಕ್ಕೆ ಅದು ಹಣಕಾಸು ಸಚಿವಾಲಯದ ಪ್ರತಿಕ್ರಿಯೆಯನ್ನು ಕೇಳಿರಲಿಲ್ಲ. ಈ ಮೊದಲು ಈ ಎರಡೂ ಕಂಪೆನಿಗಳಿಗೆ ಹೆಚ್ಚಿನ ಹಣಕಾಸಿನ ನೆರವನ್ನು ನೀಡುವುದರ ವಿರುದ್ಧ ಹಣಕಾಸು ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದ್ದು, ಇದರಿಂದ ಕೇಂದ್ರದ ಬಜೆಟ್ ವಿನಿಯೋಗಕ್ಕೆ ಭಾರೀ ಹೊರೆ ಬೀಳಲಿದೆ ಎಂದು ಎಚ್ಚರಿಸಿತ್ತು.

Comments are closed.