ರಾಷ್ಟ್ರೀಯ

ಎಂಡೋಸಲ್ಫಾನ್ ಬಾಧಿತ ವಿದ್ಯಾರ್ಥಿನೀಯ ನೃತ್ಯ ವೈರಲ್‌!

Pinterest LinkedIn Tumblr


ಪೆರ್ಲ (ಕಾಸರಗೋಡು): ಮಾರಕ ಎಂಡೋ ಸಲ್ಫಾನ್‌ ಬಾಧಿತ ವಿಶೇಷ ಚೇತನ ಬಾಲೆಯೊಬ್ಬಳು ಶಾಲೆಯಲ್ಲಿ ಮಾಡಿದ ನೃತ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದ್ದು, ಭಾರಿ ಸಂಚಲನ ಮೂಡಿಸಿದೆ. ಕಾಸರಗೋಡು ಜಿಲ್ಲೆ ಕಾಟುಕುಕ್ಕೆಯ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್‌ ಸೆಕೆಂಡರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ತೃಷಾಲಕ್ಷ್ಮಿ ಈಗ ಎಲ್ಲರ ಕಣ್ಮಣಿಯಾಗಿದ್ದಾಳೆ.

ಈಕೆ ತುಳು ಗೀತೆಗೆ ತನ್ನ ಊನಗೊಂಡ ಪಾದಗಳ ಮೂಲಕ ಇರಿಸಿದ ಹೆಜ್ಜೆ, ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದೆ. ಮನದೊಳಗಿನ ಕಲೆಯ ಬಗೆಗಿನ ಆಸಕ್ತಿ ಹಾಗೂ ತನ್ನ ಪ್ರತಿಭೆಯನ್ನು ಅನಾವರಣಗೊಳಿಸುವ ತುಡಿತದಿಂದ ಶಾಲಾ ಕಲೋತ್ಸವದ ವೇದಿಕೆಯೇರಿದ್ದಳು ಬಾಲಕಿ. ಇದೀಗ ಈಕೆಯ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಎಲ್ಲರ ಗಮನ ಸೆಳೆದಿದ್ದಾಳೆ. ಕಡು ಬಡತನ, ಎಂಡೋಸಲ್ಫಾನ್‌ ದುಷ್ಪರಿಣಾಮದಿಂದ ಎರಡೂ ಕಾಲುಗಳ ಪಾದಗಳು ಊನಗೊಂಡಿದ್ದು, ನಡೆದಾಡಲೂ ಕಷ್ಟ ಪಡುತ್ತಿರುವ ತೃಷಾಲಕ್ಷ್ಮಿ ಮೂಲತಃ ಮುಂಡಿತ್ತಡ್ಕ ಸಮೀಪದ ಬೇರಿಕುಂಜೆ ನಿವಾಸಿ ದಿ.ಅಪ್ಪಣ್ಣ ನಾಯ್ಕ ಹಾಗೂ ಸೀತಾ ದಂಪತಿಯ ಪುತ್ರಿ.

ಕಡುಬಡತನದ ಬದುಕು: ದಿನನಿತ್ಯದ ತುತ್ತಿಗೆ ಬವಣೆ ಪಡುತ್ತಿದ್ದ ಕಡು ಬಡತನದ ಕುಟುಂಬ. ಕೇರಳ ತೋಟಗಾರಿಕಾ ನಿಗಮದ ಎಂಡೋಸಲ್ಫಾನ್‌ ಸಿಂಪಡಣೆ ದುಷ್ಪರಿಣಾಮದಿಂದ ವಿಶೇಷ ಚೇತನಳಾಗಿ ಜನಿಸಿದ ತೃಷಾಲಕ್ಷ್ಮಿ ಕಲಿಕೆ ಹಾಗೂ ಇತರ ಚಟುವಟಿಕೆಗಳಲ್ಲಿಯೂ ಸಾಕಷ್ಟು ಉತ್ಸಾಹ ಹೊಂದಿದ್ದಳು. ವಿಶೇಷ ಚೇತನರಿಗಿರುವ ನೆರವು ಹೊರತುಪಡಿಸಿ ಸರಕಾರದ ಯಾವುದೇ ಸೌಲಭ್ಯಗಳೂ ಈಕೆಗೆ ಲಭಿಸಿಲ್ಲ. ಎಂಡೋಸಲ್ಫಾನ್‌ ದುಷ್ಪರಿಣಾಮ ಪೀಡಿತರ ಯಾದಿಯಲ್ಲೂ ಈಕೆಯ ಹೆಸರು ಸೇರ್ಪಡೆಯಾಗಿಲ್ಲ.

ಅಜ್ಜನ ಮನೆಯಲ್ಲಿ ವಾಸ: ಕಳೆದ ವರ್ಷ ತಂದೆ ಅಪ್ಪಣ್ಣ ನಾಯ್ಕ ಅವರ ನಿಧನದೊಂದಿಗೆ ಬೇರೆ ದಾರಿ ಇಲ್ಲದೆ ತಾಯಿ ಹಾಗೂ ಸಹೋದರಿ ಸೌಮ್ಯಾ ಅವರೊಂದಿಗೆ ಅಜ್ಜ ಕಾಟುಕುಕ್ಕೆ ಕುಡ್ತಡ್ಕದ ಈಶ್ವರ ನಾಯ್ಕ ಅವರ ಮನೆಗೆ ಬಂದು ವಾಸಿಸುತ್ತಿದ್ದಾರೆ. ಸ್ಥಳೀಯ ಕಾಟುಕುಕ್ಕೆ ಶಾಲೆಯಲ್ಲಿ ಸಹೋದರಿಯರಿಬ್ಬರೂ ಕಲಿಯುತ್ತಿದ್ದಾರೆ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಂಡಿತ್ತಡ್ಕದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದ್ದಳು ತೃಷಾಲಕ್ಷ್ಮಿ. ಅಜ್ಜನ ಮನೆಯಲ್ಲೂ ಬಡತನವಿದೆ. ತೃಷಾಳ ಸೋದರ ಮಾವ ರಮೇಶ್‌ ಕೂಡ ಹುಟ್ಟಿನಿಂದಲೇ ಎಂಡೋಸಲ್ಫಾನ್‌ ಬಾಧಿತರು. ತೃಷಾಳ ಅಜ್ಜ 70ರ ಹರೆಯದ ಈಶ್ವರ ನಾಯ್ಕ ಕೂಲಿ ಮಾಡಿ ಕುಟುಂಬ ಸಲಹುತ್ತಿದ್ದಾರೆ. ತಾಯಿ ಸೀತಾ ಅವರೂ ಬೀಡಿ ಕಟ್ಟುತ್ತಿದ್ದಾರೆ. ಕುಟುಂಬಕ್ಕೆ ಸಹೃದಯರ ನೆರವು ಅಗತ್ಯವಿದೆ.

Comments are closed.