ರಾಷ್ಟ್ರೀಯ

ಸುರಿಯುವ ಮಳೆ ನಡುವೆ ಶರದ್ ಪವಾರ್​​ ರ‍್ಯಾಲಿಯನ್ನುದ್ದೇಶಿಸಿ ಭಾಷಣ

Pinterest LinkedIn Tumblr


ಮುಂಬೈ(ಅ.19): ಸುರಿಯುವ ಮಳೆಯನ್ನು ಲೆಕ್ಕಿಸದೇ ಚುನಾವಣಾ ಪ್ರಚಾರದ ವೇಳೆ ರ‍್ಯಾಲಿಯನ್ನುದ್ದೇಶಿಸಿ ಮಾತಾಡಿದ ನ್ಯಾಷನಲ್‌ ಕಾಂಗ್ರೆಸ್‌ ಪಾರ್ಟಿ(ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್​​ ಅವರ ಭಾಷಣದ ತುಣುಕು ಭಾರೀ ವೈರಲ್​​ ಆಗಿದೆ. “ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಗೆಲ್ಲಲೇಬೇಕೆಂಬ ಶರದ್​​ ಪವಾರ್​​ ಅವರ ಹಠವನ್ನು ಕೊನೆಗೂ ಮಳೆರಾಯ ಕೂಡ ನಿಲ್ಲಿಸಲಾಗಲಿಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಾಗಿ ಎನ್​​ಸಿಪಿ ಪಕ್ಷವೂ ಬಿರುಸಿನ ಪ್ರಚಾರ ಮಾಡುತ್ತಿದೆ. ಇದರ ಭಾಗವಾಗಿಯೇ ಇಲ್ಲಿನ ಸತಾರಾ ಎಂಬ ಪ್ರದೇಶದಲ್ಲಿ ಎನ್​​ಸಿಪಿ ಚುನಾವಣಾ ರ‍್ಯಾಲಿ ಆಯೋಜಿಸಿತ್ತು. ಭೀಕರ ಮಳೆ ನಡುವೆಯೂ ಎನ್​​ಸಿಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತಾಡಿದ ಶರಾದ್​​ ಪವಾರ್​ ಭಾಷಣ​​ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮೂಲಕ ಶರದ್‌ ಪವಾರ್‌ ಮತದಾರರ ಮನಸ್ಸು ಗೆಲ್ಲುವಲ್ಲಿ ಯಶಸ್ಸು ಕಂಡಿದ್ದಾರೆ.

ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆ ಇದೆ. ಇದಕ್ಕೆ ಮಳೆರಾಯನ ಆಶೀರ್ವಾದವೂ ನಮ್ಮ ಮೇಲಿದೆ. ನನ್ನ ಐವತ್ತು ವರ್ಷದ ರಾಜಕೀಯ ಇತಿಹಾಸದಲ್ಲೇ ನಾನು ಸೋಲು ಕಂಡಿಲ್ಲ. ಸತಾರಾ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯ ಗೆಲುವು ಪ್ರತಿಷ್ಠಯೆ ಪ್ರಶ್ನೆಯಾಗಿದೆ. ಹಾಗಾಗಿ ನೀವು ನಮ್ಮ ಎನ್​​ಸಿಪಿ ಅಭ್ಯರ್ಥಿಗಳಿಗೆ ವೋಟ್​ ಹಾಕಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಕೇಂದ್ರ ಚುನಾವಣೆ ಆಯೋಗವೂ ಮಹಾರಾಷ್ಟ್ರ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಿಸಿದೆ. ಇದೇ ಅಕ್ಟೋಬರ್​​​​ 21ರಂದು ನಡೆಯುವ ಚುನಾವಣೆ ಗೆಲ್ಲಲು ಶಿವಸೇನೆ-ಬಿಜೆಪಿ ಮೈತ್ರಿ ಮತ್ತು ಕಾಂಗ್ರೆಸ್​​-ಎನ್​​ಸಿಪಿ ಮೈತ್ರಿ ಸೆಣಸಾಟಕ್ಕೆ ಮುಂದಾಗಿವೆ.

ಇತ್ತ ಶರದ್​​ ಪವಾರ್​​​ ಎನ್​​ಸಿಪಿ ಪಕ್ಷವನ್ನು ಗೆಲ್ಲಿಸಲು ಶ್ರಮಿಸುತ್ತಿದ್ದರೇ, ಅತ್ತ ತಮ್ಮ ಪಕ್ಷದ ಹಿರಿಯ ಮುಖಂಡರೇ ಬಿಜೆಪಿಗೆ ಹೋಗುತ್ತಿದ್ದಾರೆ. ಹಾಗಾಗಿಯೇ ಹೇಗಾದರೂ ಸರಿಯೇ ಈ ಚುನಾವಣೆ ಗೆಲ್ಲಲೇಬೇಕೆಂದು ಶರದ್​​ ಪಣತೊಟ್ಟಿದ್ದಾರೆ.

ಸತಾರಾ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟಿಗೆ ಚುನಾವಣೆ ನಡೆಯುತ್ತಿದೆ. ಇಲ್ಲಿನ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಉದಯನ್‌ರಾಜೇ ಭೋಸಲೆ ವಿರುದ್ಧ ಎನ್​​ಸಿಪಿ ಅಭ್ಯರ್ಥಿಯಾಗಿ ಶ್ರೀನಿವಾಸ್‌ ಪಾಟೀಲ್‌ ಕಣಕ್ಕಿಳಿದಿದ್ದಾರೆ. ಅಲ್ಲದೇ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಶಿವೇಂದ್ರರಾಜೇ ಭೋಸಲೆ ಎದುರು ಎನ್‌ಸಿಪಿಯ ದೀಪಕ್‌ ಸಾಹೇಬ್‌ರಾವ್‌ ಪವಾರ್‌ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರವೂ ಮಹಾರಾಷ್ಟ್ರದ ಪಶ್ಚಿಮ ವಲಯಕ್ಕೆ ಬರಲಿದ್ದು, ಎನ್‌ಸಿಪಿ ತನ್ನ ಸ್ಥಾನಗಳನ್ನು ಉಳಿಸಿಕೊಳ್ಳುವುದು ಈಗ ಸವಾಲಿನ ಸ್ಪರ್ಧೆಯಾಗಿದೆ.

Comments are closed.