ರಾಷ್ಟ್ರೀಯ

20-21ನೇ ಶೈಕ್ಷಣಿಕ ವರ್ಷದಿಂದ 15 ಕೇಂದ್ರೀಯ ವಿ.ವಿಯಲ್ಲಿ ಸಿಇಟಿ ನಡೆಸಲು ಎನ್‌ಟಿಎ ನಿರ್ಧಾರ.

Pinterest LinkedIn Tumblr

ಹೊಸದಿಲ್ಲಿ: ದೇಶದ 15 ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಪ್ರವೇಶಕ್ಕೆ ಸಮಾನ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಿರ್ಧರಿಸಿದೆ.

2020-21ನೇ ಶೈಕ್ಷಣಿಕ ವರ್ಷದಿಂದ ಇದು ಜಾರಿಗೆ ಬರಲಿದ್ದು, ಈ ವಿಶ್ವವಿದ್ಯಾನಿಲಯಗಳು ಅಸ್ಸಾಂ, ಆಂಧ್ರಪ್ರದೇಶ, ಕೇರಳ, ಜಮ್ಮು, ಜಾರ್ಖಂಡ್, ಗುಜರಾತ್, ತಮಿಳುನಾಡು ಮತ್ತು ಕರ್ನಾಟಕದಲ್ಲಿವೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ಕುರಿತ ಪ್ರಸ್ತಾವಕ್ಕೆ ಗುರುವಾರ ಅನುಮೋದನೆ ನೀಡುವ ಸಾಧ್ಯತೆ ಇದೆ. ಸಿಇಟಿ ವ್ಯವಸ್ಥೆಗೆ ಸೇರಿಕೊಳ್ಳುವ ಸಂಬಂಧ ಇತರ ಕೇಂದ್ರೀಯ ವಿವಿಗಳ ಜತೆ ಎನ್‌ಟಿಎ ಮಾತುಕತೆ ನಡೆಸಲಿದೆ.

ಕೇಂದ್ರೀಯ ವಿವಿ ಸಮಾನ ಪ್ರವೇಶ ಪರೀಕ್ಷೆಯನ್ನು ವ್ಯವಸ್ಥೆ ಮಾಡುವ ಹೊಣೆಯನ್ನು ಮೊದಲ ಬಾರಿಗೆ ಎನ್‌ಟಿಎಗೆ ವಹಿಸಲಾಗಿದೆ. ಕಳೆದ ವರ್ಷವರೆಗೂ ರಾಜಸ್ಥಾನ ವಿವಿ ಈ ಪರೀಕ್ಷೆ ನಡೆಸುತ್ತಿತ್ತು.

2020ನೇ ಮೇ ತಿಂಗಳಲ್ಲಿ ಮೊದಲ ಸಿಇಟಿ ನಡೆಯಲಿದ್ದು, ಸುಮಾರು 50 ಪದವಿ ಕೋರ್ಸ್‌ಗಳು, 170 ಸ್ನಾತಕೋತ್ತರ ಪದವಿ ಕೋರ್ಸ್‌ಗಳು ಮತ್ತು 100ಕ್ಕೂ ಹೆಚ್ಚು ಎಂಫಿಲ್ ಹಾಗೂ ಪಿಎಚ್‌ಡಿಗಳಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ.

ಎನ್‌ಟಿಎ ಈ ವರ್ಷ ದೆಹಲಿ ವಿವಿ ಹಾಗೂ ಜೆಎನ್‌ಯುನಲ್ಲಿ ಕೆಲ ಕೋರ್ಸ್‌ಗಳ ಪ್ರವೇಶಕ್ಕೆ ಕಂಪ್ಯೂಟರ್ ಆಧರಿತ ಪ್ರವೇಶ ಪರೀಕ್ಷೆ ನಡೆಸಿತ್ತು.

Comments are closed.