ರಾಷ್ಟ್ರೀಯ

ಬಿಹಾರದಲ್ಲಿ ಹೆಚ್ಚಾದ ಡೆಂಗ್ಯೂ; ರೋಗಿ ಸಂಬಂಧಿಕರಿಂದ ಕೇಂದ್ರ ಸಚಿವ ಅಶ್ವಿನಿ ಚೌಬೆ ಮೇಲೆ ಇಂಕ್ ಎಸೆತ

Pinterest LinkedIn Tumblr


ನವದೆಹಲಿ: ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಡೆಂಗ್ಯೂ ರೋಗಿಗಳನ್ನು ಭೇಟಿ ಮಾಡಲು ಆಗಮಿಸಿದ್ದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರ ಮೇಲೆ ರೋಗಿಗಳ ಸಂಬಂಧಿಕರೊಬ್ಬರು ಇಂಕ್ ಎಸೆದು ಪ್ರತಿಭಟಿಸಿದ ಘಟನೆ ಮಂಗಳವಾರ ನಡೆದಿದೆ.

ಇತ್ತೀಚೆಗೆ ಬಿಹಾರದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಅಲ್ಲಲ್ಲಿ ನೀರು ನಿಂತ ಪರಿಣಾಮ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು, ರೋಗಿಗಳನ್ನು ಪಾಟ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಅವರ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ ಆಗಮಿಸಿ ಹೊರಹೊಗುತ್ತಿದ್ದ ಕೇಂದ್ರ ಸಚಿವರ ಮೇಲೆ ವ್ಯಕ್ತಿಯೋರ್ವ ಇಂಕ್ ಎರಚಿ ಪರಾರಿಯಾಗಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ರಾಜ್ಯ ಆರೋಗ್ಯ ಇಲಾಖೆಯ ಹೇಳಿಕೆಯ ಪ್ರಕಾರ, ಸೆಪ್ಟೆಂಬರ್‌ನಿಂದ ಪಾಟ್ನಾದಲ್ಲಿ ಸುಮಾರು 900 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಪ್ರವಾಹದಿಂದಾಗಿ ಇದುವರೆಗೆ 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

Comments are closed.