ರಾಷ್ಟ್ರೀಯ

ಮಲೇಷ್ಯಾದಿಂದ ತಾಳೆ ಎಣ್ಣೆ ಮತ್ತು ಇತರ ವಸ್ತುಗಳ ಆಮದಿಗೆ ನಿರ್ಬಂಧ ಹೇರಿದ ಭಾರತ

Pinterest LinkedIn Tumblr

ಹೊಸದಿಲ್ಲಿ: ಕಾಶ್ಮೀರದಲ್ಲಿ ಭಾರತ ಕೈಗೊಂಡ ಕ್ರಮವನ್ನು ಮಲೇಷ್ಯಾ ಟೀಕಿಸಿದ ಕಾರಣಕ್ಕಾಗಿ ಆ ದೇಶದಿಂದ ತಾಳೆ ಎಣ್ಣೆ ಸೇರಿದಂತೆ ಹಲವು ಉತ್ಪನ್ನಗಳ ಆಮದನ್ನು ನಿರ್ಬಂಧಿಸಲು ಭಾರತ ಚಿಂತನೆ ನಡೆಸಿದೆ.

ಮಲೇಷ್ಯಾದಿಂದ ತಾಳೆ ಎಣ್ಣೆ ಮತ್ತು ಇತರ ವಸ್ತುಗಳ ಆಮದು ನಿರ್ಬಂಧಿಸುವ ಮಾರ್ಗೋಪಾಯಗಳ ಬಗ್ಗೆ ಭಾರತ ಪರಿಶೀಲಿಸುತ್ತಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ನೇತೃತ್ವದಲ್ಲಿ ನಡೆದ ಯೋಜಿತ ನಿರ್ಬಂಧಗಳ ಬಗೆಗಿನ ಚರ್ಚೆಯಲ್ಲಿ ಪಾಲ್ಗೊಂಡ ಉನ್ನತ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಮಲೇಷ್ಯಾ ಪ್ರಧಾನಿ ಮಹತ್ಯಾರ್ ಮೊಹ್ಮದ್ ಅವರು ಕಳೆದ ತಿಂಗಳು ವಿಶ್ವ ಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ, “ಭಾರತ ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ನಡೆಸಿ ಆಕ್ರಮಿಸಿಕೊಂಡಿದೆ” ಎಂದು ಆಪಾದಿಸಿ, ಪಾಕಿಸ್ತಾನ ಹಾಗೂ ಭಾರತ ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಸಲಹೆ ಮಾಡಿದ್ದು, ಭಾರತವನ್ನು ಕೆರಳಿಸಿದೆ.
ಮಲೇಷ್ಯಾ ನಿಲುವಿನ ವಿರುದ್ಧ ಪ್ರಬಲ ಸಂದೇಶವನ್ನು ರವಾನಿಸಲು ಭಾರತ ಬಯಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ವಿಶ್ವದಲ್ಲೇ ಅತಿಹೆಚ್ಚು ಖಾದ್ಯ ತೈಲ ಆಮದು ಮಾಡಿಕೊಳ್ಳುವ ದೇಶವಾದ ಭಾರತ ಮಲೇಷ್ಯಾದಿಂದ ಖಾದ್ಯ ತೈಲ ಆಮದು ಮಾಡಿಕೊಳ್ಳುವ ಬದಲಾಗಿ ಇಂಡೋನೇಷ್ಯಾ, ಅರ್ಜೆಂಟೀನಾ ಮತ್ತು ಉಕ್ರೇನ್‍ನಿಂದ ಆಮದು ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಭಾರತದ ಒಟ್ಟು ಖಾದ್ಯ ತೈಲ ಆಮದಿನ ಪೈಕಿ ತಾಳೆ ಎಣ್ಣೆ ಪ್ರಮಾಣ ಶೇಕಡ 66ರಷ್ಟಿದ್ದು, ಇಂಡೋನೇಷ್ಯಾ ಹಾಗೂ ಮಲೇಷ್ಯಾದಿಂದ ವಾರ್ಷಿಕ ತೊಂಬತ್ತು ಲಕ್ಷ ಟನ್ ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ. ಮಲೇಷ್ಯಾ ತೈಲ ಮಂಡಳಿಯ ಅಂಕಿ ಅಂಶಗಳ ಪ್ರಕಾರ 2019ರ ಮೊದಲ ಒಂಬತ್ತು ತಿಂಗಳಲ್ಲಿ ಮಲೇಷ್ಯಾದಿಂದ ಭಾರತ 39 ಲಕ್ಷ ಟನ್ ತಾಳೆ ಎಣ್ಣೆ ಆಮದು ಮಾಡಿಕೊಂಡಿದೆ.

Comments are closed.