ರಾಷ್ಟ್ರೀಯ

ಮೊದಲ ಬಾರಿಗೆ ಹೊಸ ತೆರಿಗೆ ವ್ಯವಸ್ಥೆಯ(‘​ಜಿಎಸ್‌ಟಿ’) ಸಮಗ್ರ ಪರಿಷ್ಕರಣೆಗೆ ಆದೇಶ ನೀಡಿದ ಕೇಂದ್ರ ಸರ್ಕಾರ

Pinterest LinkedIn Tumblr

ಹೊಸದಿಲ್ಲಿ: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಯಾದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ, ಹೊಸ ವ್ಯವಸ್ಥೆಯ ಸಮಗ್ರ ಪರಿಷ್ಕರಣೆಗೆ ಆದೇಶ ನೀಡಿದೆ.

ಸಂಗ್ರಹ ಹೆಚ್ಚಿಸುವ ಮತ್ತು ಸೋರಿಕೆ ತಡೆಯುವ ಉದ್ದೇಶದಿಂದ ತೆರಿಗೆ ಸ್ತರಗಳ ಪರಿಶೀಲನೆ ಮತ್ತು ತೆರಿಗೆ ದರಗಳನ್ನು ಮರು ನಿಗದಿಪಡಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ 12 ಮಂದಿ ಸದಸ್ಯರ ಸಮಿತಿಗೆ ಈ ಪರಿಷ್ಕರಣೆ ಹೊಣೆ ವಹಿಸಲಾಗಿದ್ದು, ಜಿಎಸ್‌ಟಿ ಸಂಗ್ರಹ ಹಾಗೂ ಅನುಷ್ಠಾನ ವ್ಯವಸ್ಥೆಯನ್ನು ಸಮನ್ವಯಗೊಳಿಸುವುದು ಇದರ ಉದ್ದೇಶ. ಶುಕ್ರವಾರ ಪ್ರಧಾನಿ ಕಚೇರಿ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜತೆ ಚರ್ಚಿಸುವ ಹಿನ್ನೆಲೆಯಲ್ಲಿ ಕೇಂದ್ರ ಈ ನಿರ್ಧಾರಕ್ಕೆ ಬಂದಿದೆ. ರಾಜ್ಯಗಳು ಜಿಎಸ್‌ಟಿ ಸಂಗ್ರಹ ಸುಧಾರಣೆಗೆ ಒತ್ತು ನೀಡುವಂತೆ ಪ್ರಧಾನಿ ಸಚಿವಾಲಯ ಸೂಚಿಸಲಿದೆ ಎಂದು ತಿಳಿದುಬಂದಿದೆ.

ನೂತನ ಸಮಿತಿಗೆ ನೀಡಲಾದ ಕಾರ್ಯಸೂಚಿಯಲ್ಲಿ, ಕಾಯ್ದೆ ದುರ್ಬಳಕೆ ತಡೆಯಲು, ಸ್ವಯಂ ಬದ್ಧತೆ ಸುಧಾರಣೆ, ಒಟ್ಟಾರೆ ಬದ್ಧತೆ ಪ್ರಮಾಣಕ್ಕೆ ಉತ್ತೇಜನ ನೀಡುವುದು ಮತ್ತು ತೆರಿಗೆ ಕಳ್ಳತನವನ್ನು ತಡೆಯುವ ಕ್ರಮಗಳನ್ನು ಒಳಗೊಂಡಂತೆ ವ್ಯವಸ್ಥಿತ ಬದಲಾವಣೆ ಮತ್ತಿತರ ಅಂಶಗಳು ಸೇರಿವೆ. ಪ್ರಸ್ತುತ ಇರುವ ತೆರಿಗೆ ವ್ಯವಸ್ಥೆಯು ರೆಸ್ಟೋರೆಂಟ್‌ನಂಥ ವಲಯಗಳಲ್ಲಿ ಸೋರಿಕೆಗೆ ಕಾರಣವಾಗಿದೆ. ಆದ್ದರಿಂದ ದರವನ್ನು ಪರಿಷ್ಕರಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ.

ಆಯಾ ಸ್ತರಗಳಲ್ಲಿ ಸೂಕ್ತ ಉತ್ಪನ್ನಗಳನ್ನು ಸೇರಿಸುವ ಸಲುವಾಗಿ ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ಕೂಡಾ ಸಮಿತಿಗೆ ಸೇರಿಸಿ ಕೊಳ್ಳಲಾಗುತ್ತಿದೆ ಎಂದು ಮೂಲಗಳು ವಿವರಿಸಿವೆ.

Comments are closed.