ರಾಷ್ಟ್ರೀಯ

ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಮಾಜಿ ಕಾಂಗ್ರೆಸ್ ಅಧ್ಯಕ್ಷ; ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನ

Pinterest LinkedIn Tumblr

ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಗೆ ಕೇವಲ ಎರಡು ವಾರ ಬಾಕಿ ಇರುವಾಗಲೇ ಕಾಂಗ್ರೆಸ್ ಗೆ ಭಾರಿ ಹಿನ್ನಡೆಯಾಗಿದ್ದು, ಹರಿಯಾಣ ಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಶೋಕ್ ತನ್ವರ್ ಅವರು ಶನಿವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಕಳೆದ ತಿಂಗಳು ಪಕ್ಷದಿಂದ ಅಮಾನತುಗೊಂಡಿದ್ದ ಅಶೋಕ್ ತನ್ವರ್ ಅವರು ಇಂದು ಟ್ವೀಟರ್ ನಲ್ಲಿ ರಾಜೀನಾಮೆ ಪತ್ರ ಪ್ರಕಟಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದಿರುವ ನಾಲ್ಕು ಪುಟಗಳ ರಾಜೀನಾಮೆ ಪತ್ರವನ್ನು ತನ್ವರ್ ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ತೊರೆಯುವುದಾಗಿ ತಿಳಿಸಿದ್ದಾರೆ.

ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ಈಗ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಬಿಕ್ಕಟ್ಟಿಗೆ ಸಿಲುಕಿದೆ. ಆದರೆ ಇದು ರಾಜಕೀಯ ವಿರೋಧಿಗಳಿಂದ ಅಲ್ಲ, ತನ್ನದೇ ಒಳಜಗಳದಿಂದ ಪಕ್ಷ ಪತನದ ಹಾದಿ ಹಿಡಿದಿದೆ ಎಂದು ತನ್ವರ್ ದೂರಿದ್ದಾರೆ. ಹಲವು ತಿಂಗಳು ಯೋಚಿಸಿದ ಬಳಿಕ ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ನನ್ನ ರಕ್ತದಲ್ಲಿದೆ. ನನ್ನ ಹೋರಾಟ ವೈಯಕ್ತಿಕವಾದುದಲ್ಲ, ಆದರೆ ದೇಶದ ಅತ್ಯಂತ ಹಳೆಯ ಪಕ್ಷವನ್ನು ನಾಶ ಮಾಡುತ್ತಿರುವ ವ್ಯವಸ್ಥೆ ವಿರುದ್ಧ ಎಂಬುದಾಗಿ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹರಿಯಾಣ ವಿಧಾನಸಭೆ ಚುನಾವಣೆ ನಡೆಯಲು ಇನ್ನು ಎರಡು ವಾರಗಳ ಕಾಲ ಇರುವ ನಡುವೆಯೇ ಟಿಕೆಟ್ ಹಂಚಿಕೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವುದಾಗಿ ಬಹಿರಂಗವಾಗಿ ಆರೋಪಿಸಿದ್ದಾರೆ.

Comments are closed.