
ನವದೆಹಲಿ(ಅ. 01): ಅಸ್ಸಾಮ್ನಲ್ಲಿ ಜಾರಿಯಾಗಿರುವ ಎನ್ಆರ್ಸಿ ಯೋಜನೆಯನ್ನು ದೇಶಾದ್ಯಂತ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿರುವ ಎನ್ಆರ್ಸಿ ಯೋಜನೆಯನ್ನು ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರುವುದು ಬಿಜೆಪಿಯ ಮಹತ್ವಾಕಾಂಕ್ಷಿ ಗುರಿಯಾಗಿದೆ. ಚುನಾವಣೆಗೆ ಇದೇ ಅದರ ಟ್ರಂಪ್ ಕಾರ್ಡ್ ಆಗಿದೆ. ಕೋಲ್ಕತಾದ ನೇತಾಜಿ ಸ್ಟೇಡಿಯಂನಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ಎನ್ಆರ್ಸಿ ಯೋಜನೆ ಜಾರಿಗೆ ತರುವುದಾಗಿ ಪುನರುಚ್ಚರಿಸಿದ್ದಾರೆ. ಅಷ್ಟೇ ಅಲ್ಲ, ಎಲ್ಲಾ ನುಸುಳುಕೋರರನ್ನೂ ದೇಶದಿಂದ ಗಡೀಪಾರು ಮಾಡುವುದಾಗಿಯೂ ಅವರು ಘೋಷಿಸಿದ್ಧಾರೆ.
ಆದರೆ, ಎನ್ಆರ್ಸಿ ಯೋಜನೆಗೆ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಡ್ಡಗಾಲು ಹಾಕಿದ್ದಾರೆಂಬುದು ಅಮಿತ್ ಶಾ ಆರೋಪ: “ಪಶ್ಚಿಮ ಬಂಗಾಳದಲ್ಲಿ ಎನ್ಆರ್ಸಿ ನಡೆಸಲು ಬಿಡುವುದಿಲ್ಲ ಎಂದು ದೀದಿ ಹೇಳುತ್ತಾರೆ. ಆದರೆ, ಪ್ರತಿಯೊಬ್ಬ ನುಸುಳುಕೋರನನ್ನೂ ದೇಶದಿಂದ ಹೊರಗಟ್ಟುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ” ಎಂದು ತಿಳಿಸಿದ್ದಾರೆ. ಮಮತಾ ಬ್ಯಾನರ್ಜಿ ಮೇಲೆ ಇನ್ನಷ್ಟು ಹರಿಹಾಯ್ದ ಅವರು, ಎಡಪಕ್ಷವು ಅಧಿಕಾರದಲ್ಲಿದ್ಧಾಗ ಹಾಗೂ ಆಕೆ ವಿಪಕ್ಷದಲ್ಲಿದ್ದಾಗ ಅಕ್ರಮ ವಲಸಿಗರನ್ನು ಭಾರತದಿಂದ ಹೊರಕಳುಹಿಸಬೇಕೆನ್ನುತ್ತಿದ್ದರು ಎಂದು ಟೀಕಿಸಿದ್ದಾರೆ.
ಮುಸ್ಲಿಮ್ ವಲಸಿಗರೇ ಟಾರ್ಗೆಟ್?
ಅಕ್ರಮ ವಲಸಿಗರ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮುಸ್ಲಿಮ್ ಧರ್ಮೀಯರೇ ಟಾರ್ಗೆಟ್ ಆಗಿದ್ದಾರೆ. ಅಮಿತ್ ಶಾ ಕೂಡ ಇದನ್ನೇ ಒತ್ತಿ ಹೇಳಿದ್ಧಾರೆ. “ಹಿಂದೂ, ಸಿಖ್, ಜೈನ, ಬೌದ್ಧ ಮತ್ತು ಕ್ರೈಸ್ತ ವಲಸಿಗರನ್ನು ಭಾರತದಿಂದ ಹೊರಹೋಗುವಂತೆ ಬಲವಂತಪಡಿಸುವುದಿಲ್ಲ ಎಂದು ಇವತ್ತು ನಾನು ವಾಗ್ದಾನ ನೀಡುತ್ತೇನೆ. ಯಾವುದೇ ಊಹಾಪೋಹದ ಸುದ್ದಿಗಳನ್ನು ನಂಬಬೇಡಿ. ಎನ್ಆರ್ಸಿ ಯೋಜನೆ ಜಾರಿಗೆ ತರುವ ಮೊದಲು ಪೌರತ್ವ ತಿದ್ದುಪಡಿ ಮಸೂದೆ ತರಲಾಗುವುದು. ಆ ಮಸೂದೆ ಮೂಲಕ ಈ ಐದು ಧರ್ಮೀಯರಿಗೆ ಭಾರತೀಯ ಪೌರತ್ವ ದೊರಕಿಸಿಕೊಡಲಾಗುವುದು” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ರಾಷ್ಟ್ರೀಯ ಪೌರತ್ವ ನೊಂದಣಿ (ಎನ್ಆರ್ಸಿ) ಯೋಜನೆಯನ್ನು ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲಾಗುವುದು ಎಂಬ ಸುದ್ದಿ ಬಂದಾಗಿನಿಂದಲೂ ಇಲ್ಲಿಯ ಅನೇಕ ನಿವಾಸಿಗಳು ತತ್ತರಿಸಿಹೋಗಿದ್ಧಾರೆನ್ನಲಾಗುತ್ತಿದೆ. ಕೆಲ ವರದಿಗಳ ಪ್ರಕಾರ, ಎನ್ಆರ್ಸಿ ಭಯದಿಂದ ಹತ್ತಕ್ಕೂ ಹೆಚ್ಚು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರಂತೆ.
ಬಾಂಗ್ಲಾದೇಶದಿಂದ ಲಕ್ಷಾಂತರ ಜನರು ಭಾರತಕ್ಕೆ ಅಕ್ರಮವಾಗಿ ವಲಸೆ ಬಂದಿರುವ ಅಂದಾಜು ಇದೆ. ಇವರಲ್ಲಿ ಬಹುತೇಕರು ಅಸ್ಸಾಮ್ ಮತ್ತು ಪಶ್ಚಿಮ ಬಂಗಾಳದಲ್ಲಿ ನೆಲಸಿದ್ದಾರೆ. ದೇಶದ ವಿವಿಧೆಡೆಯೂ ಇವರು ಪಸರಿಸಿದ್ದಾರೆ. ಕರ್ನಾಟಕದಲ್ಲೂ ಇವರು ದೊಡ್ಡ ಸಂಖ್ಯೆಯಲ್ಲಿದ್ದಾರೆ ಎಂದು ಇಲ್ಲಿನ ಪೊಲೀಸರು ದೃಢಪಡಿಸಿದ್ಧಾರೆ. ಅಕ್ರಮ ಬಾಂಗ್ಲಾದೇಶೀ ವಲಸಿಗರು ದೇಶದ್ರೋಹಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆಂಬ ಆರೋಪಗಳೂ ಇವೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶೀ ವಲಸಿಗರ ಸಮಸ್ಯೆಯು ಹಲವು ಕಡೆ ಚುನಾವಣಾ ಚರ್ಚೆಯ ಸರಕಾಗಿದೆ.
Comments are closed.