ರಾಷ್ಟ್ರೀಯ

ಬಿಹಾರದಲ್ಲಿ ಭಾರೀ ಮಳೆಗೆ 13 ಮಂದಿ ಸಾವು: 3 ಜಿಲ್ಲೆಯ ಜನರ ಬದುಕು ಮೂರಾಬಟ್ಟೆ!

Pinterest LinkedIn Tumblr


ಪಾಟ್ನಾ (ಸೆಪ್ಟೆಂಬರ್.29); ಬಿಹಾರದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಗೆ ಈವರೆಗೆ 13 ಜನ ಮೃತಪಟ್ಟಿದ್ದಾರೆ. ಅಲ್ಲದೆ, ಇಲ್ಲಿನ ಪಾಟ್ನಾ, ಭಾಗಲ್ಪುರ್ ಹಾಗೂ ಕೈಮೂರ್ ಜಿಲ್ಲೆಗಳಲ್ಲಿ ಕಳೆದ 48 ಗಂಟೆಗಳಿಂದ ನಿರಂತರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ರೈಲು ರಸ್ತೆ ಸಾರಿಗೆಯೂ ಸಂಪೂರ್ಣ ಸ್ಥಗಿತವಾಗಿದೆ ಎಂದು ವರದಿಯಾಗಿದೆ.

ಹವಾಮಾನ ಇಲಾಖೆಯ ಪ್ರಕಾರ, ರಾಜ್ಯ ರಾಜಧಾನಿಯಲ್ಲೇ ಶುಕ್ರವಾರ ಸಂಜೆಯಿಂದ 200 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ ಎಂದು ವರದಿಯಾಗಿದೆ. ವಿಪತ್ತು ನಿರ್ವಹಣಾ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರತ್ಯಯ್ ಅಮೃತ್ ಈ ಪ್ರವಾಹದ ಪರಿಸ್ಥಿತಿಯನ್ನು “ಸಂಪೂರ್ಣವಾಗಿ ಅನಿರೀಕ್ಷಿತ” ಎಂದು ಬಣ್ಣಿಸಿದ್ದಾರೆ.

ಮಳೆಯ ಪರಿಣಾಮ ಮೂರೂ ಜಿಲ್ಲೆಗಳ ಅನೇಕ ವಿದ್ಯುತ್ ಉಪಕೇಂದ್ರಗಳಿಗೆ ನೀರು ನುಗ್ಗಿದ್ದು, ನಗರದಲ್ಲಿ ದೀರ್ಘಾವಧಿಗೆ ಕತ್ತಲೆ ಆವರಿಸುವ ಸಾಧ್ಯೆತೆ ಇದೆ.

ಅಲ್ಲದೆ, ಭಾರೀ ಮಳೆಯಿಂದಾಗಿ ಈಶಾನ್ಯ ರೈಲ್ವೆಯ ಬಲ್ಲಿಯಾ-ಚಾಪ್ರಾ ವಿಭಾಗದ ರೈಲು ಸೇವೆಯನ್ನೂ ಸಹ ಭಾನುವಾರ ಮುಂಜಾನೆ 4.15ರ ನಂತರ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. “ಬಲ್ಲಿಯಾ-ಚಾಪ್ರಾ ವಿಭಾಗದಲ್ಲಿ ಹಳಿಗಳ ಮೇಲೆ ವಿಪರೀತ ಪ್ರಮಾಣದ ನೀರು ಮತ್ತು ಮಣ್ಣು ಶೇಖರಣೆಯಾದ ಕಾರಣ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ” ಎಂದು ಎನ್ಇಆರ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹೇಶ್ ಗುಪ್ತಾ ಮಾಹಿತಿ ನೀಡಿದ್ದಾರೆ.

ಪ್ರವಾಹ ಪರಿಸ್ಥಿತಿಯ ಕುರಿತು ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, “ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಜನ ಸಾಮಾನ್ಯರು ತಾಳ್ಮೆ ಮತ್ತು ಧೈರ್ಯವನ್ನು ತಂದುಕೊಳ್ಳಬೇಕು ಎಂದು ನಾನು ಮನವಿ ಮಾಡುತ್ತೇನೆ.

ಈ ಧಾರಾಕಾರ ಮಳೆಗೆ ಹವಾಮಾನದಲ್ಲಿನ ವೈಪರೀತ್ಯವೇ ಕಾರಣವಾಗಿದ್ದು, ಪರಿಸರ ಸಂರಕ್ಷಣೆ ಮೂಲಕ ನಾವೆಲ್ಲರೂ ಒಟ್ಟಾಗಿ ಹವಾಮಾನ ಬದಲಾವಣೆಯನ್ನು ಎದುರಿಸಲು ಸಂಕಲ್ಪ ಮಾಡಬೇಕು” ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕಾಗಿ ಹೆಚ್ಚುವರಿ ಎನ್​ಡಿಆರ್​ಎಫ್​ ತಂಡವನ್ನು ರಾಜ್ಯಕ್ಕೆ ಕಳುಹಿಸುವಂತೆ ಬಿಹಾರ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿಕೊಂಡಿದೆ. ಅಲ್ಲದೆ, ಬಿಹಾರದಲ್ಲಿ ಮುಂದಿನ 48 ಗಂಟೆಗಳ ಕಾಲ ಈ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ತಿಳಿಸಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

Comments are closed.