ರಾಷ್ಟ್ರೀಯ

ಪ್ರಥಮ ದೇಶೀ ನಿರ್ಮಿತ BVRAAM ‘ಅಸ್ತ್ರ’ ಕ್ಷಿಪಣಿ, ಯುದ್ಧಕ್ಕೆ ಸನ್ನದ್ಧ

Pinterest LinkedIn Tumblr


ನವದೆಹಲಿ(ಸೆ. 29): ಭಾರತದ ಮೊದಲ ದೇಶೀ ನಿರ್ಮಿತ ಏರ್ ಟು ಏರ್ ಕ್ಷಿಪಣಿ ‘ಅಸ್ತ್ರ’ ಈಗ ಯುದ್ಧಕ್ಕೆ ಸನ್ನದ್ಧವಾಗಿದೆ. ಡಿಆರ್​ಡಿಓದಲ್ಲಿ ಕಳೆದ 15 ವರ್ಷಗಳಷ್ಟು ಸುದೀರ್ಘ ಕಾಲ ಅಭಿವೃದ್ಧಿಪಡಿಸಲಾಗಿರುವ ಅಸ್ತ್ರ ತನ್ನ ವಿಭಾಗದಲ್ಲಿ ವಿಶ್ವದ ಅತ್ಯುತ್ತಮ ಕ್ಷಿಪಣಿಗಳಲ್ಲೊಂದೆನಿಸಿದೆ. ಭಾರತೀಯ ವಾಯುಪಡೆಯ ಸುಖೋಯ್-30ಎಂಕೆಐ ಯುದ್ಧವಿಮಾನಗಳಿಗೆ 200ಕ್ಕೂ ಹೆಚ್ಚು ಅಸ್ತ್ರ ಕ್ಷಿಪಣಿಗಳನ್ನು ಅಳವಡಿಸುವ ಸಾಧ್ಯತೆ ಇದೆ.

ಬಿಯಾಂಡ್ ವಿಷುವಲ್ ರೇಂಜ್ ಏರ್ ಟು ಏರ್ ಮಿಸೈಲ್ (ಬಿವಿರಾಮ್) ಅಂದರೆ ಗೋಚರ ಸಾಮರ್ಥ್ಯ ಮೀರಿದ ಆಗಸದಿಂದ ಆಗಸಕ್ಕೆ ಚಿಮ್ಮುವ ಈ ಕ್ಷಿಪಣಿಯನ್ನು ಆಗಸದಲ್ಲಿ ವೈಮಾನಿಕ ಯುದ್ಧಕ್ಕೆ ಬಳಸಬಹುದಾಗಿದೆ. ಈ ಅಸ್ತ್ರದ ಈಗಿನ ವ್ಯಾಪ್ತಿ 110 ಕಿಮೀ ಆಗಿದೆ. ಇದರ ಸಾಮರ್ಥ್ಯವನ್ನು 160 ಕಿಮೀಗೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ.

“ವಿಶ್ವದ ಅತ್ಯುತ್ತಮ ಬಿವಿಆರ್​ಎಎಎಂಗಳಲ್ಲಿ ಅಸ್ತ್ರ ಕೂಡ ಒಂದು. ಇದರ ಶ್ರೇಣಿ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸುವ ಅವಕಾಶವಿದೆ” ಎಂದು ಡಿಆರ್​ಡಿಓ ಮುಖ್ಯಸ್ಥ ಡಾ| ಜಿ. ಸತೀಶ್ ರೆಡ್ಡಿ ಹೇಳಿದರೆಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

‘ಅಸ್ತ್ರ’ ಸಾಮರ್ಥ್ಯದಷ್ಟು ಕ್ಷಿಪಣಿಗಳು ಅಮೆರಿಕ, ರಷ್ಯಾ, ಫ್ರಾನ್ಸ್, ಇಸ್ರೇಲ್ ಇತ್ಯಾದಿ ಕೆಲವೇ ದೇಶಗಳ ಬಳಿ ಇವೆ. ಈ ಕ್ಷಿಪಣಿಗೆ ಆಗಸದಲ್ಲೇ ಶತ್ರುಗಳ ಸೂಪರ್​ಸಾನಿಕ್ ಫೈಟರ್​ಗಳನ್ನು ನಾಶ ಮಾಡುವ ಸಾಮರ್ಥ್ಯ ಇದೆ. ಶಬ್ದಕ್ಕಿಂತ 4 ಪಟ್ಟು ಹೆಚ್ಚು ವೇಗದಲ್ಲಿ ಹಾರಬಲ್ಲ 3.57 ಮೀಟರ್ ಉದ್ದದ ಒಂದು ಅಸ್ತ್ರ ಕ್ಷಿಪಣಿಗೆ ಸುಮಾರು 7-8 ಕೋಟಿ ವೆಚ್ಚವಾಗುತ್ತದೆ. ಇದಕ್ಕೆ ಹಲವು ಪಟ್ಟು ಹೆಚ್ಚು ಹಣ ತೆತ್ತು ರಷ್ಯಾ, ಫ್ರಾನ್ಸ್, ಇಸ್ರೇಲ್ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈಗ ಕಡಿಮೆ ವೆಚ್ಚದಲ್ಲಿ ಡಿಆರ್​ಡಿಓ ಉತ್ಕೃಷ್ಟ ಕ್ಷಿಪಣಿಯನ್ನು ತಯಾರು ಮಾಡಿರುವುದು ಭಾರತೀಯ ವಾಯುಪಡೆಯ ಬಲವನ್ನು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಅಗ್ನಿಯಂತಹ ಕ್ಷಿಪಣಿಯ ತುರ್ತು ಅವಶ್ಯಕತೆ ಭಾರತೀಯ ಸೇನೆಗಿರುವುದು ಇತ್ತೀಚಿನ ಬೆಳವಣಿಗೆಯಿಂದ ಸಾಬೀತಾಗಿತ್ತು. ಬಾಲಾಕೋಟ್ ವಾಯುದಾಳಿ ಬಳಿಕ ಭಾರತ ಮತ್ತು ಪಾಕ್ ಗಡಿಭಾಗದಲ್ಲಿ ನಡೆದ ವೈಮಾನಿಕ ಘರ್ಷಣೆಯಲ್ಲಿ ಭಾರತದ ಕೆಲ ನ್ಯೂನತೆಗಳು ಎದ್ದುಕಂಡಿದ್ದವು. ಅಂಥ ವೈಮಾನಿಕ ಘರ್ಷಣೆಯಲ್ಲಿ ಅಸ್ತ್ರದಂತಹ ಕ್ಷಿಪಣಿಗಳು ಬಹಳ ಉಪಯೋಗಕ್ಕೆ ಬರುತ್ತವೆ. ಭಾರತದ ಬಳಿ 5 ಸಾವಿರ ಕಿಮೀಗೂ ಹೆಚ್ಚು ದೂರ ಶ್ರೇಣಿಯ ಸಾಮರ್ಥ್ಯ ಇರುವ ಅಗ್ನಿ ಕ್ಷಿಪಣಿಗಳಿವೆಯಾದರೂ ಅಲ್ಪ ಅಂತರದ ಕ್ಷಿಪ್ರ ಕಾರ್ಯಾಚರಣೆಗೆ ಅಸ್ತ್ರದಂಥ ಕ್ಷಿಪಣಿ ಹೆಚ್ಚು ಉಪಯುಕ್ತವೆಂದು ಪರಿಗಣಿಸಲಾಗಿದೆ.

Comments are closed.