ರಾಷ್ಟ್ರೀಯ

ದೇಶದ 64 ಕ್ಷೇತ್ರಗಳಿಗೆ ಉಪಚುನಾವಣೆ

Pinterest LinkedIn Tumblr


ನವದೆಹಲಿ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಅಕ್ಟೋಬರ್‌ 21ರಂದು ಮತದಾನ ನಡೆಯಲಿದ್ದು, ಅಕ್ಟೋಬರ್‌ 24ರಂದು ಫಲಿತಾಂಶ ಹೊರಬೀಳಲಿದೆ. ನವೆಂಬರ್​​ 2ರಂದು ಹರಿಯಾಣ ಹಾಗೂ ನವೆಂಬರ್​ 9ರಂದು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಐದು ವರ್ಷದ ಅವಧಿ ಪೂರ್ಣಗೊಳ್ಳಲಿದೆ. ಹೀಗಾಗಿ ಶನಿವಾರ ವಿಧಾನಸಭೆ ಎಲೆಕ್ಷನ್ ಘೋಷಣೆಯಾಗಿದೆ.

ಈ ಎರಡು ರಾಜ್ಯಗಳಲ್ಲಿ ಸೆಪ್ಟೆಂಬರ್ 27ರಂದು ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 4 ಕಡೆ ದಿನವಾಗಿದ್ದು, 7ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ. ಹರಿಯಾಣದಲ್ಲಿ 1 ಕೋಟಿ 82 ಲಕ್ಷ ಮತದಾರರಿದ್ದರೆ, ಮಹಾರಾಷ್ಟ್ರದಲ್ಲಿ 8 ಕೋಟಿ 94 ಲಕ್ಷ ಮತದಾರರಿದ್ದಾರೆ. ಚುನಾವಣಾ ವೆಚ್ಚಕ್ಕೆ ಕಡಿವಾಣ ಹಾಕಿರುವ ಆಯೋಗ, ಒಬ್ಬ ಅಭ್ಯರ್ಥಿಗೆ 28 ಲಕ್ಷ ರೂಪಾಯಿ ಮಾತ್ರ ನಿಗದಿ ಮಾಡಿದೆ. ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ.

ಉತ್ತರ ಪ್ರದೇಶ – 11
ಬಿಹಾರ, ಕೇರಳ – ತಲಾ 5
ಗುಜರಾತ್, ಪಂಜಾಬ್ – ತಲಾ 4
ಹಿಮಾಚಲಪ್ರದೇಶ, ತಮಿಳುನಾಡು, ರಾಜಸ್ಥಾನ – ತಲಾ 2
ಅರುಣಾಚಲಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಮೇಘಾಲಯ, ಒಡಿಶಾ, ಪುದುಚೇರಿ – ತಲಾ 1

ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಜೊತೆಗೆ 17 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 64 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. ಉತ್ತರಪ್ರದೇಶದಲ್ಲಿ 11, ಬಿಹಾರ ಮತ್ತು ಕೇರಳದಲ್ಲಿ ತಲಾ 5, ಗುಜರಾತ್ ಮತ್ತು ಪಂಜಾಬ್‌ನಲ್ಲಿ ತಲಾ 4, ಹಿಮಾಚಲಪ್ರದೇಶ, ತಮಿಳುನಾಡು ಮತ್ತು ರಾಜಸ್ಥಾನದಲ್ಲಿ ತಲಾ 2, ಅರುಣಾಚಲಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಮೇಘಾಲಯ, ಒಡಿಶಾ ಮತ್ತು ಪುದುಚೇರಿಯಲ್ಲಿ ತಲಾ ಒಂದು ಹಾಗೂ ಸಿಕ್ಕಿಂನಲ್ಲಿ 3 ಕ್ಷೇತ್ರಗಳಿಗೆ ಬೈಎಲೆಕ್ಷನ್ ನಡೆಯಲಿದೆ. ಬಿಹಾರದಲ್ಲಿ ಒಂದು ಲೋಕಸಭೆ ಕ್ಷೇತ್ರ ಉಪಚುನಾವಣೆ ಘೋಷಣೆಯಾಗಿದೆ.

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗೆ ಚುನಾವಣೆ ಘೋಷಿಸಿದ ಬೆನ್ನಿಗೇ ಈ ಎರಡೂ ರಾಜ್ಯಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹರಿಯಾಣದಲ್ಲಿ ಬಿಜೆಪಿ ಈವರೆಗೆ ಏಳು ಸಮಾವೇಶ ನಡೆಸಿದೆ. ಪ್ರತಿಪಕ್ಷಗಳು ಒಗ್ಗಟ್ಟಾಗಿಲ್ಲ ಎನ್ನುವುದೇ ಬಿಜೆಪಿಗೆ ಬಹುದೊಡ್ಡ ಪ್ಲಸ್ ಪಾಯಿಂಟ್. ಅಸ್ಸಾಂನಂತೆ ಹರಿಯಾಣದಲ್ಲಿಯೂ ರಾಷ್ಟ್ರೀಯ ಪೌರತ್ವ ನೋಂದಣಿ ಮೂಲಕ ಅಕ್ರಮ ವಲಸಿಗರ ಹೊರಹಾಕುವ ವಿಚಾರದ ಚರ್ಚೆಯೂ ಗರಿಗೆದರಿದೆ.

ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಸೋಲುಂಡಿದ್ದ ಕಾಂಗ್ರೆಸ್ ಇದೀಗ ಸಂಘಟನೆ ಬಲಪಡಿಸಿಕೊಳ್ಳುವ ಮೂಲಕ ಬಿಜೆಪಿ ಎದುರಿಸಲು ಸಜ್ಜಾಗುತ್ತಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಒಳಜಗಳದ ಲಾಭ ಬಿಜೆಪಿಗೆ ಲಾಭ ತಂದುಕೊಟ್ಟಿತು. ಈಗಲೂ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಇದೆಲ್ಲಾ ನಿವಾರಿಸಿ ಪಕ್ಷ ಗೆಲ್ಲಿಸುವ ಸವಾಲು ಇದೇ ತಿಂಗಳು ಹರಿಯಾಣ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕವಾಗಿರುವ ದಲಿತ ನಾಯಕಿ ಕುಮಾರಿ ಶೆಲ್ಜಾ ಮೇಲಿದೆ. ಹರಿಯಾಣದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿವೆ.

ಇನ್ನು, 288 ಸದಸ್ಯ ಬಲದ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನಾ ಸೀಟು ಹಂಚಿಕೆ ಅಂತಿಮ ಹಂತ ಮುಟ್ಟಿವೆ. 2014ರಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಬಿಜೆಪಿ 122, ಶಿವಸೇನಾ 63 ಸ್ಥಾನಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್‌ ಮತ್ತು ಎನ್‌ಸಿಪಿ ಕೂಡ ಪ್ರತ್ಯೇಕವಾಗಿ ಕಣಕ್ಕಿಳಿದಿದ್ದವು. ಕಾಂಗ್ರೆಸ್ 42, ಎನ್‌ಸಿಪಿ 41 ಕ್ಷೇತ್ರಗಳಲ್ಲಿ ಗೆದ್ದಿತ್ತು. ಆದ್ರೆ, ಈ ಬಾರಿ ಕಾಂಗ್ರೆಸ್- ಎನ್‌ಸಿಪಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ ಬಂದರೆ ದೇವೇಂದ್ರ ಫಡಣವೀಸ್‌ಗೆ ಮತ್ತೆ ಮುಖ್ಯಮಂತ್ರಿ ಪಟ್ಟ ಖಚಿತ. ಈ ಬಗ್ಗೆ ಪ್ರಧಾನಿ ಮೋದಿಯೇ ಸುಳಿವು ನೀಡಿದ್ದಾರೆ.

Comments are closed.