ರಾಷ್ಟ್ರೀಯ

ಕಾಶ್ಮೀರಿಗಳ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಮೋದಿ ವಿರುದ್ಧ ಕೇಸು ದಾಖಲು!

Pinterest LinkedIn Tumblr

ಹೌಸ್ಟನ್: ಕಾಶ್ಮೀರಿಗಳ ಹಕ್ಕನ್ನು ಪ್ರಧಾನಿ ನರೇಂದ್ರ ಮೋದಿ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಅಮೆರಿಕಾದಲ್ಲಿ ನೆಲೆಸಿರುವ ಇಬ್ಬರು ಕಾಶ್ಮೀರ ಕಾರ್ಯಕರ್ತರು ಅಮೆರಿಕಾದ ಹೌಸ್ಟನ್ ನಲ್ಲಿ ನರೇಂದ್ರ ಮೋದಿ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಈ ಮಧ್ಯೆ ಅಮೆರಿಕಾಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ವಿರುದ್ಧ ಸಿಖ್ ಗುಂಪು ಮತ್ತು ಪಾಕಿಸ್ತಾನೀಯರು ನಾಳೆ ಹೌಸ್ಟನ್ ನಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು ಪ್ರಧಾನಿಯವರ ಭದ್ರತೆ ಕುರಿತು ಕೇಂದ್ರ ಸರ್ಕಾರ ಅಮೆರಿಕಾ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ.

ಪ್ರಧಾನಿ ಮೋದಿ ವಿರುದ್ಧ ಹೂಡಿರುವ ಫೆಡರಲ್ ಮೊಕದ್ದಮೆಯ ಪರಿಣಾಮಗಳನ್ನು ತಿಳಿಯುವ ನಿಟ್ಟಿನಲ್ಲಿ ಭಾರತೀಯ ರಾಯಭಾರ ಕಾರ್ಯನಿರ್ವಹಿಸುತ್ತಿದೆ.

ಹೌಸ್ಟನ್ ಕ್ರೋನಿಕಲ್ ನಲ್ಲಿ ಬಂದ ವರದಿ ಪ್ರಕಾರ, 73 ಪುಟಗಳ ಮೊಕದ್ದಮೆಯನ್ನು ಅಮೆರಿಕಾದಲ್ಲಿ ನೆಲೆಸಿರುವ ಕಾಶ್ಮೀರಿ ಕಾರ್ಯಕರ್ತರು ಮತ್ತು ಖಲಿಸ್ತಾನ್ ರೆಫೆರೆಂಡಮ್ ಫ್ರಂಟ್ ದಾಖಲಿಸಿದ್ದು ಅದರಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಮೂಲಕ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಭಾರತೀಯ ಸೇನೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕನ್ವಾಲ್ ಜೀತ್ ಸಿಂಗ್ ದಿಲ್ಲೊನ್ ಕಾಶ್ಮೀರಿಗಳ ಮೇಲೆ ಕ್ರೂರ, ಅಮಾನವೀಯ ವರ್ತನೆ ತೋರಿಸಿದ್ದಾರೆ, ಜಮ್ಮು-ಕಾಶ್ಮೀರದಲ್ಲಿ ಕಾನೂನುಬಾಹಿರ ಹತ್ಯೆ, ಸಂಘರ್ಷಗಳಿಗೂ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

1991ರ ಟಾರ್ಚರ್ ವಿಕ್ಟಿಮ್ ಪ್ರೊಟೆಕ್ಷನ್ ಆಕ್ಟ್ ನಡಿ ಸಿವಿಲ್ ದೂರನ್ನು ದಾಖಲಿಸಲಾಗಿದ್ದು, ಹತ್ಯೆ, ಹಿಂಸೆ, ಅಮಾನವೀಯ ವರ್ತನೆ ಆರೋಪದ ಮೇಲೆ ವಿದೇಶಿ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ವಿರುದ್ಧ ಅಮೆರಿಕಾದಲ್ಲಿ ಸಲ್ಲಿಸುವ ಮೊಕದ್ದಮೆಯಾಗಿದೆ.

Comments are closed.