ರಾಷ್ಟ್ರೀಯ

ಆಂಧ್ರದ ಮಾಜಿ ಸ್ಪೀಕರ್ ಕೋಡೇಲ ಶಿವಪ್ರಸಾದ ರಾವ್ ಆತ್ಮಹತ್ಯೆ

Pinterest LinkedIn Tumblr

ಹೈದರಾಬಾದ್‌: ತೆಲುಗು ದೇಶಂ ಪಕ್ಷ (ಟಿಡಿಪಿ) ದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ, ಆಂಧ್ರ ಪ್ರದೇಶ ವಿಧಾನಸಭೆಯ ಮಾಜಿ ಸ್ಪೀಕರ್‌ ಕೊಡೆಲ ಶಿವ ಪ್ರಸಾದ್‌ ರಾವ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಪೊಲೀಸರು ಹೇಳಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅವರು ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ತಕ್ಷಣ ಅವರನ್ನು ಬಸವತಾರಕಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ ಎಂಬುದಾಗಿ ವೈದ್ಯರು ಘೋಷಿಸಿದರು. ನಟ ಬಾಲಕೃಷ್ಣ ಜೊತೆ ಸೇರಿ ಸ್ವತಃ ಶಿವ ಪ್ರಸಾದ್‌ ರಾವ್‌ ಈ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದರು.

ಶಿವಪ್ರಸಾದ ರಾವ್ ಅವರು ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಇತ್ತೀಚೆಗಷ್ಟೇ ಕೋಡೇಲ ಶಿವಪ್ರಸಾದ ರಾವ್ ಅವರು ಹೃದಯಾಘಾತಗೊಂಡು ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಗೊಂಡಿದ್ದರು. ಈಗ ಅವರು ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಅವರ ಕುಟುಂಬದ ಮೂಲಗಳ ಪ್ರಕಾರ ಕೆಲವಾರು ದಿನಗಳಿಂದ ಅವರು ಮಾನಸಿಕವಾಗಿ ಖಿನ್ನರಾಗಿದ್ದರೆನ್ನಲಾಗಿದೆ.

ರೈತರ ಕುಟುಂಬದಿಂದ ಬಂದಿದ್ದ ಶಿವ ಪ್ರಸಾದ ರಾವ್ ಅವರು ವೃತ್ತಿಯಲ್ಲಿ ವೈದ್ಯರು. 1983ರಲ್ಲಿ ಎನ್​ಟಿ ರಾಮರಾವ್ ಸ್ಥಾಪಿಸಿದ ತೆಲುಗು ದೇಶಂ ಪಕ್ಷದ ಮೂಲಕ ರಾಜಕೀಯಕ್ಕೆ ಬಂದವರು. ಆದರೆ, ಇತ್ತೀಚೆಗೆ ಜಗನ್​ಮೋಹನ್ ರೆಡ್ಡಿ ಸರ್ಕಾರ ತಮ್ಮ ಕುಟುಂಬದ ಮೇಲೆ ರಾಜಕೀಯ ಹಗೆತನ ಸಾಧಿಸುತ್ತಿದೆ. ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಸಾಕಷ್ಟು ನೊಂದಿದ್ದರೆನ್ನಲಾಗಿದೆ.

ಇವತ್ತು ಅವರು ಬೆಳಗ್ಗೆ ತಿಂಡಿ ತಿಂದು ನೇರವಾಗಿ ತಮ್ಮ ಕೋಣೆಗೆ ಹೋದವರು ಬಹಳ ಹೊತ್ತಾದರೂ ಹೊರಬರಲಿಲ್ಲ. ಒಳಗೆ ಹೋಗಿ ನೋಡಿದಾಗ ಅವರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದೆವೆ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.

ಕೋಡೇಲ ಶಿವಪ್ರಸಾದ ರಾವ್ ಅವರ ನಿಧನಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ಧಾರೆ.

Comments are closed.