ರಾಷ್ಟ್ರೀಯ

ಹುಟ್ಟಿನಿಂದಲೇ ಬ್ರಾಹ್ಮಣರು ಶ್ರೇಷ್ಠರು; ಲೋಕಸಭೆ ಸ್ಪೀಕರ್

Pinterest LinkedIn Tumblr


ನವದೆಹಲಿ: ಬ್ರಾಹ್ಮಣರು ಹುಟ್ಟಿನಿಂದಲೇ ಶ್ರೇಷ್ಠರಾಗಿರುತ್ತಾರೆ. ಅವರ ಶ್ರಮ, ತ್ಯಾಗ ಮತ್ತು ಇತರೆ ಸಮುದಾಯಗಳಿಗೆ ನೀಡುವ ಮಾರ್ಗದರ್ಶನವೇ ಇದಕ್ಕೆ ಕಾರಣವಾಗಿದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

ರಾಜಸ್ಥಾನದ ಕೋಟಾದಲ್ಲಿ ಭಾನುವಾರ ನಡೆದ ಅಖಿಲ ಬ್ರಾಹ್ಮಣ ಮಹಾಸಭಾ ಸಭೆಯಲ್ಲಿ ಮಾತನಾಡಿದ ಓಂ ಬಿರ್ಲಾ, ಬ್ರಾಹ್ಮಣ ಸಮುದಾಯ ಯಾವಾಗಲೂ ಇತರ ಸಮುದಾಯದವರಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡಿಕೊಂಡು ಬಂದಿದೆ. ಈ ಸಮುದಾಯವು ದೇಶದಲ್ಲಿ ಮಾರ್ಗದರ್ಶಕ ಪಾತ್ರವನ್ನು ನಿರ್ವಹಿಸಿದೆ. ಶಿಕ್ಷಣ ಪ್ರಸಾರ ಮತ್ತು ಸಮಾಜದ ಮೌಲ್ಯಗಳನ್ನು ತಿಳಿಸುವಲ್ಲಿ ಬ್ರಾಹ್ಮಣರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಒಂದು ವೇಳೆ ಹಳ್ಳಿಯೊಂದರಲ್ಲಿ ಒಂದೇ ಒಂದು ಬ್ರಾಹ್ಮಣ ಕುಟುಂಬವಿದ್ದರೆ ಆ ಕುಟುಂಬದ ಸೇವೆ ಮತ್ತು ಸಮರ್ಪಣೆಯಿಂದಾಗಿ ಅವರು ಆ ಗ್ರಾಮದಲ್ಲಿ ಉನ್ನತ ಸ್ಥಾನವನ್ನು ಹೊಂದಿರುತ್ತಾರೆ. ಆದ್ದರಿಂದ ಬ್ರಾಹ್ಮಣರು ಹುಟ್ಟಿನಿಂದಲೇ ಶ್ರೇಷ್ಠರಾಗಿರುತ್ತಾರೆ ಎಂದು ಹೇಳಿದರು.

ಸಮುದಾಯವನ್ನು ಹೊಗಳಿ ಮಾತನಾಡಿದ್ದನ್ನು ಬಿರ್ಲಾ ಅವರು ಭಾನುವಾರ ಟ್ವಿಟ್​ ಕೂಡ ಮಾಡಿದ್ದರು. ಹಾಗೆಯೇ ಇದನ್ನೇ ನವೀಕರಿಸಿ ಫೇಸ್​ಬುಕ್​ನಲ್ಲೂ ಪ್ರಕಟಿಸಿದ್ದರು.

ಬಿರ್ಲಾ ಅವರ ಟ್ವೀಟ್​ಗೆ ಹಲವು ಟ್ವಿಟ್ಟಿಗರು ಖಂಡನೆ ವ್ಯಕ್ತಪಡಿಸಿದ್ದಾರೆ. ಮೊದಲು ಇವರು ಹೆಚ್ಚು ಗೌರವಯುತವಾಗಿರುವ ತಮ್ಮ ಸ್ಪೀಕರ್ ಸ್ಥಾನಕ್ಕೆ ಗೌರವ ಕೊಡುವುದನ್ನು ಕಲಿಯಲಿ ಎಂದು ಟ್ವಿಟ್ಟಿಗರು ಹರಿಹಾಯ್ದಿದ್ದಾರೆ.

ರಾಜಸ್ಥಾನದ ಪಿಯುಸಿಎಲ್​ನ ಅಧ್ಯಕ್ಷರಾದ ಕವಿತಾ ಶ್ರೀವಾಸ್ತವ್​ ಅವರು ಬಿರ್ಲಾ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ ಮತ್ತು ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಒಂದು ಸಮುದಾಯ ಶ್ರೇಷ್ಠ ಎಂದು ಹೇಳುವುದು ಅಥವಾ ಒಂದು ಸಮುದಾಯಕ್ಕಿಂತ ಮತ್ತೊಂದು ಸಮುದಾಯ ಮುಖ್ಯ ಎಂದು ಹೇಳುವುದು ಸಂವಿಧಾನದ 14ನೇ ವಿಧಿ ವಿರುದ್ಧವಾಗಿದೆ. ಇಂತಹ ಹೇಳಿಕೆ ಜಾತಿಗಳ ನಡುವೆ ಕೀಳರಿಮೆಯನ್ನು ಹುಟ್ಟುಹಾಕುವುದರ ಜೊತೆಗೆ ಜಾತಿವಾದವನ್ನು ಉತ್ತೇಜಿಸುತ್ತದೆ ಎಂದು ಖಂಡನೆ ವ್ಯಕ್ತಪಡಿಸಿರುವ ಶ್ರೀವಾಸ್ತವ್​, ಪಿಯುಸಿಎಲ್​ನಿಂದ ಬಿರ್ಲಾ ವಿರುದ್ಧ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಅಲ್ಲದೇ, ಇದೇ ಕಾರ್ಯಕ್ರಮದಲ್ಲಿ ಕೋಟಾ ಕ್ಷೇತ್ರದ ಸಂಸದರಾಗಿರುವ ಬಿರ್ಲಾ, ಈ ದೇಶದಲ್ಲಿ ಈಗಲೂ ಬ್ರಾಹ್ಮಣ ಸಮುದಾಯದಿಂದಲೇ ಅತಿ ಹೆಚ್ಚು ಶಿಕ್ಷಕರು ಬಂದಿರುವನ್ನು ನೀವು ಗುರುತಿಸಬಹುದಾಗಿದೆ ಎಂದು ಹೇಳಿದ್ದರು.

Comments are closed.