
ನವದೆಹಲಿ: ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಇಂದು ಕೂಡ ದೆಹಲಿ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಲಿಲ್ಲ. ಹಾಗೆಯೇ ಅವರನ್ನು ಒಂದು ದಿನದ ಮಟ್ಟಿಗೆ ಮತ್ತೆ ಸಿಬಿಐ ಕಸ್ಟಡಿಗೆ ಅವರನ್ನು ಒಪ್ಪಿಸಿತು. ಆದರೆ, ಇಂದು ಬೆಳಗ್ಗೆ ಸುಪ್ರೀಂಕೋರ್ಟ್ ಚಿದಂಬರಂ ಅವರನ್ನು ತಿಹಾರ ಜೈಲಿಗೆ ಕಳುಹಿಸದಂತೆ ತಡೆಯಾಜ್ಞೆ ನೀಡಿ, ಗುರುವಾರದವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿತ್ತು.
ಚಿದಂಬರಂ ಅವರಿಗೆ ಜಾಮೀನು ನೀಡಬೇಕೇ ಬೇಡವೇ ಎಂಬುದನ್ನು ನಾಳೆ ಸಿಬಿಐ ನ್ಯಾಯಾಲಯ ನಿರ್ಧಾರ ಮಾಡಲಿದೆ. ಚಿದಂಬರಂ ಅವರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಪ್ರತಿಬಾರಿ ಸಿಬಿಐ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೇಹ್ತಾ ವಾದ ಮಾಡುತ್ತಾ ಬಂದಿದ್ದಾರೆ. ವೈಯಕ್ತಿಕ ಸ್ವಾತಂತ್ರ್ಯ ಎಂಬುದು ಎಲ್ಲರಿಗೂ ಒಂದೇ. ಆಟೋ ರಿಕ್ಷಾ ಚಾಲಕ ಕೂಡ ಚಿದಂಬರಂ ಅವರಿಗಿಂತ ಚಿಕ್ಕವರಲ್ಲ. ಕಾನೂನು ಪ್ರಕ್ರಿಯೆಗಳು ಎಲ್ಲರಿಗೂ ಒಂದೇ ಎಂದು ವಾದಿಸಿದ್ದರು.
ಇದಕ್ಕೂ ಮುನ್ನ ಸುಪ್ರೀಂಕೋರ್ಟ್ನಲ್ಲಿ ವಕೀಲ ಕಪಿಲ್ ಸಿಬಾಲ್ ಅವರು ಚಿದಂಬರಂ ಅವರನ್ನು ತಿಹಾರ ಜೈಲಿಗೆ ಕಳುಹಿಸದಂತೆ ಬಲವಾಗಿ ವಾದ ಮಂಡನೆ ಮಾಡಿದ್ದರು.
ಚಿದಂಬರಂ ಅವರಿಗೆ 74 ವರ್ಷ. ಅವರನ್ನು ಗೃಹಬಂಧನದಲ್ಲಿ ಇರಿಸಲಿ. ಆದರೆ, ತಿಹಾರ ಜೈಲಿಗೆ ಕಳುಹಿಸುವುದು ಬೇಡ ಎಂದು ಸಿಬಾಲ್ ವಾದ ಮಾಡಿದ್ದರು. ಬಳಿಕ ಚಿದಂಬರಂ ಅವರನ್ನು ಮುಂದಿನ ಆದೇಶದವರೆಗೂ ತಿಹಾರ್ ಜೈಲಿಗೆ ಕಳುಹಿಸದಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಇದರಿಂದ ಚಿದಂಬರಂ ಅವರಿಗೆ ಕೊಂಚ ಸಮಾಧಾನ ನೀಡಿತ್ತು.
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಭ್ರಷ್ಟಾಚಾರ ಮತ್ತು ಹಣ ಅವ್ಯವಹಾರ ಆರೋಪಗಳು ಪಿ. ಚಿದಂಬರಂ ಮೇಲೆ ಕೇಳಿಬಂದಿದೆ. ಈ ಸಂಬಂಧ ಆಗಸ್ಟ್ 21ರಂದು ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ಪಡೆದು, ತನ್ನ ಕಸ್ಟಡಿಯಲ್ಲಿ ಇರಿಸಿಕೊಂಡಿದೆ.
Comments are closed.