ರಾಷ್ಟ್ರೀಯ

ಇಂದು ನಿಗಮ್‍ಬೋಧ್ ಘಾಟ್‍ನಲ್ಲಿ ಅರುಣ್ ಜೇಟ್ಲಿ ಅಂತ್ಯಕ್ರಿಯೆ

Pinterest LinkedIn Tumblr


ನವದೆಹಲಿ: ಬಿಜೆಪಿಯ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಅಂತ್ಯಕ್ರಿಯೆ ಇಂದು ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ.

ಬಿಜೆಪಿ ಕಚೇರಿಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಅರುಣ್ ಜೇಟ್ಲಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಿಡಲಾಗುತ್ತದೆ. ಅಲ್ಲಿಂದ ಮೆರವಣಿಗೆ ಮೂಲಕ ನಿಗಮ್‍ಬೋಧ್ ಘಾಟ್‍ಗೆ ತಲುಪಿ, ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಜೇಟ್ಲಿ ಅವರನ್ನು ಇದೇ ತಿಂಗಳ 9ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸುದೀರ್ಘ 15 ದಿನಗಳ ಕಾಲ ವೆಂಟಿಲೇಟರ್, ಐಸಿಯುನಲ್ಲಿಟ್ಟರೂ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ 12.07ಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಮಕ್ಕಳನ್ನು ಜೇಟ್ಲಿ ಅಗಲಿದ್ದಾರೆ. ಕೈಲಾಶ್ ಕಾಲೋನಿಯ ನಿವಾಸದಲ್ಲಿ ಸಂಬಂಧಿಕರು, ಗಣ್ಯರು, ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ಹಿರಿಯ ನಾಯಕರಾದ ಅಡ್ವಾಣಿ, ಮುರಳಿ ಮನೋಹರ ಜೋಷಿ, ಒಡನಾಡಿಗಳಾಗಿದ್ದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರು, ಕಾಂಗ್ರೆಸ್‍ನ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡೆಲ್ಲಿ ಸಿಎಂ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಕಂಬನಿ ಮಿಡಿದಿದ್ದಾರೆ. ಕ್ರಿಕೆಟಿಗರಾದ ಸೆಹ್ವಾಗ್, ಗಂಭೀರ್ ಸಹ ಸಂತಾಪ ಸೂಚಿಸಿದ್ದಾರೆ. ಅಂದಹಾಗೆ, ಸುಷ್ಮಾ ಸ್ವರಾಜ್ ಬೆನ್ನಿಗೇ ಜೇಟ್ಲಿ ಅವರು ಅಗಲಿರೋದು ಬಿಜೆಪಿ ನಾಯಕರಿಗೆ ಸಹಿಸಲಾಗದ ನೋವು ತಂದಿದೆ. ಸಾಲು ಸಾಲು ದಿಗ್ಗಜರನ್ನು ಕಳೆದುಕೊಳ್ಳುತ್ತಿರುವ ಬಿಜೆಪಿ ಬಡವಾಗುತ್ತಿದೆ.

Comments are closed.