ರಾಷ್ಟ್ರೀಯ

ಕುಡಿದ ಮತ್ತಿನಲ್ಲಿ ಗೋಡೆಗೆ ಕಾರು ಗುದ್ದಿಸಿದ ಬಿಜೆಪಿ ಸಂಸದೆ, ನಟಿ ರೂಪಾ ಗಂಗೂಲಿ ಪುತ್ರನ ಬಂಧನ

Pinterest LinkedIn Tumblr


ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿಜೆಪಿ ಸಂಸದೆ ಮತ್ತು ನಟಿ ರೂಪಾ ಗಂಗೂಲಿ ಅವರ ಮಗ 20 ವರ್ಷದ ಆಕಾಶ್​ ಮುಖ್ಯೋಪಾಧ್ಯಯ್​ ಕೋಲ್ಕತ್ತ ನಗರದಲ್ಲಿ ಅತಿ ವೇಗವಾಗಿ ಕಾರನ್ನು ಚಲಾಯಿಸಿ, ಗೋಡೆಗೆ ಗುದ್ದಿದ ಆರೋಪದ ಮೇಲೆ ಬಂಧಿಸಲಾಗಿದೆ. ಕಾರು ಚಾಲನೆ ವೇಳೆ ಆಕಾಶ್​ ಕುಡಿದಿದ್ದರು ಎಂದು ಹೇಳಲಾಗಿದೆ.

ಚಾಲನೆ ವೇಳೆ ನಿಯಂತ್ರಣ ಕಳೆದುಕೊಂಡು ಆಕಾಶ್​ ರಾಯಲ್​ ಕಲ್ಚರ್​ ಗಾಲ್ಫ್​ ಕ್ಲಬ್​ ಗೋಡೆಗೆ ಕಾರಿನಿಂದ ಗುದ್ದಿದ್ದಾರೆ. ಕಾರು ಮತ್ತು ಗೋಡೆ ಸಂಪೂರ್ಣ ಜಖಂಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಾಯಕಾರಿ ಚಾಲನೆ ಆರೋಪದ ಮೇಲೆ ಆಕಾಶ್​ನನ್ನು ಬಂಧಿಸಲಾಗಿದೆ. ಗುರುವಾರ ರಾತ್ರಿ ಕಾರು ಚಾಲನೆ ವೇಳೆ ಆಕಾಶ್​ ಕುಡಿದಿದ್ದರು ಎಂದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಗನ ಬಂಧನದ ಬಳಿಕ ಸರಣಿ ಟ್ವೀಟ್ ಮಾಡಿರುವ ರೂಪಾ ಗಂಗೂಲಿ, ನನ್ನ ಮನೆಯ ಸಮೀಪದಲ್ಲೇ ಮಗನಿಗೆ ಅಪಘಾತವಾಗಿದೆ. ಆಗ ನಾನೇ ಪೊಲೀಸರಿಗೆ ಕರೆ ಮಾಡಿ, ಕಾನೂನುರೀತ್ಯ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದೆ. ಇದರಲ್ಲಿ ಯಾವ ಪರವಾಗಿಯೂ ಹಾಗೂ ದಯವಿಟ್ಟು ರಾಜಕೀಯ ಮಾಡುವುದು ಬೇಡ. ನಾನು ನನ್ನ ಮಗನನ್ನು ಪ್ರೀತಿಸುತ್ತೇನೆ. ಆದರೆ, ಯಾರೇ ತಪ್ಪು ಮಾಡಿದರೂ ಅದು ತಪ್ಪೇ, ಅದಕ್ಕೆ ಕಾನೂನು ಪ್ರಕಾರ ಕ್ರಮವಾಗಲೇಬೇಕು. ನಾನಾದರೂ ಅಷ್ಟೇ, ಬೇರೆಯವರಾದರೂ ಅಷ್ಟೇ ಎಂದು ಟ್ವೀಟ್​ ಮಾಡಿ, ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್​ ಮಾಡಿದ್ದಾರೆ.

Comments are closed.