ನವದೆಹಲಿ(ಆ. 16): ಭಾರತ ಸರಕಾರವು ಜಮ್ಮು-ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಳಿಸಿದ ವಿಚಾರವಾಗಿ ಇಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕ್ಲೋಸ್ ಡೋರ್ ಮೀಟಿಂಗ್ ನಡೆಯಿತು. ಮಂಡಳಿಯ ಎಲ್ಲಾ ಐದು ಖಾಯಂ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಈ ಅನೌಪಚಾರಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ವ್ಯಕ್ತವಾದ ವಿಚಾರಗಳು ಅಧಿಕೃತವಾಗಿ ಬಹಿರಂಗವಾಗದಿದ್ದರೂ ಒಂದಷ್ಟು ವಿಷಯಗಳು ಬೆಳಕಿಗೆ ಬಂದಿವೆ. ಅದರ ಪ್ರಕಾರ, ಸಭೆಯಲ್ಲಿ ಪಾಕಿಸ್ತಾನಕ್ಕೆ ಚೀನಾದ ಬೆಂಬಲ ಮಾತ್ರವೇ ಸಿಕ್ಕಿದೆ. ಉಳಿದ ನಾಲ್ಕು ರಾಷ್ಟ್ರಗಳು ಭಾರತದ ನಿಲುವಿಗೆ ಬೆಂಬಲ ನೀಡಿವೆ ಎನ್ನಲಾಗಿದೆ. ಒಟ್ಟಾರೆಯಾಗಿ, ಜಮ್ಮು-ಕಾಶ್ಮೀರ ವಿಚಾರದಲ್ಲಿ ಎಲ್ಲೆ ಮೀರದಂತೆ ಸಂಯಮ ವಹಿಸಬೇಕೆಂದು ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಿಗೆ ಭದ್ರತಾ ಮಂಡಳಿ ಬುದ್ಧಿ ಮಾತು ಹೇಳಿದೆ.
ಅಮೆರಿಕ, ರಷ್ಯಾ, ಫ್ರಾನ್ಸ್, ಬ್ರಿಟನ್ ಮತ್ತು ಚೀನಾ ದೇಶಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳಾಗಿವೆ. ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪ್ರಾರಂಭವಾದ ಯುಎನ್ಎಸ್ಸಿ ಭದ್ರತಾ ಮಂಡಳಿಯ ಅನೌಪಚಾರಿಕ ಸಮಾಲೋಚನೆ ಸಭೆ ಸುಮಾರು 70 ನಿಮಿಷಗಳ ಕಾಲ ನಡೆದಿದೆ. ಕಾಶ್ಮೀರದಲ್ಲಿ ನಡೆದಿರುವ ಬೆಳವಣಿಗೆಯಿಂದ ಎರಡೂ ದೇಶಗಳ ಮಧ್ಯೆ ಸೃಷ್ಟಿಯಾಗಿರುವ ಪ್ರಕ್ಷುಬ್ದ ವಾತಾವರಣದ ಬಗ್ಗೆ ಮಂಡಳಿ ಆತಂಕ ವ್ಯಕ್ತಪಡಿಸಿತು.
ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಕೈಮೀರಿ ಹೋಗದಂತಹ ಚಟುವಟಿಕೆಗಳನ್ನ ನಡೆಸಬಾರದು. ವಿಶ್ವಸಂಸ್ಥೆ ನಿಯಮದ ಪ್ರಕಾರ ರಚನೆಯಾದ ದ್ವಿಪಕ್ಷೀಯ ಒಪ್ಪಂದದ ಆಶಯದಂತೆ ನೇರ ಮಾತುಕತೆ ಮೂಲಕ ಶಾಂತಿಯುತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಎಲ್ಲಾ ಐದು ದೇಶಗಳೂ ಕರೆ ನೀಡಿವೆ. ಹಾಗೆಯೇ, ದಕ್ಷಿಣ ಏಷ್ಯಾದ ಸೂಕ್ಷ್ಮ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸಲು ಭದ್ರತಾ ಮಂಡಳಿಯ ಸದಸ್ಯರು ನಿರ್ಧರಿಸಿದ್ದಾರೆ.
ಜಮ್ಮು-ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆ ಮೊದಲಾದ ಅಂತಾರಾಷ್ಟ್ರೀಯ ವೇದಿಕೆಯ ಮುಂದೆ ತರಲು ಪಾಕಿಸ್ತಾನ ಮೊದಲಿಂದಲೂ ಪ್ರಯತ್ನಿಸುತ್ತಲೇ ಇದೆ. ಆದರೆ, ಜಮ್ಮು-ಕಾಶ್ಮೀರದ ವಿಶೇಷಾಧಿಕಾರವನ್ನ ಭಾರತ ಸರ್ಕಾರ ರದ್ದುಗೊಳಿಸಿದ ಬಳಿಕ ಪಾಕಿಸ್ತಾನಕ್ಕೆ ಇನ್ನಷ್ಟು ಜೋರು ಧ್ವನಿಯಲ್ಲಿ ಮಾತನಾಡಲು ಅನುವಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಈ ವಿಚಾರ ಚರ್ಚೆಯಾಗಬೇಕೆಂದು ಪಾಕಿಸ್ತಾನ ಮನವಿ ಕೂಡ ಮಾಡಿಕೊಂಡಿತು. ಅದಕ್ಕಾಗಿ ಚೀನಾದ ಮೂಲಕ ಲಾಬಿಯನ್ನೂ ಮಾಡಿಸಿತು. ಚೀನಾದ ಪ್ರಯತ್ನದಿಂದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇವತ್ತು ಕ್ಲೋಸ್ಡ್ ಡೋರ್ ಕನ್ಸಲ್ಟೇಷನ್ಸ್ ಸಭೆ ನಡೆಯಿತು.
ವಿಶ್ವಸಂಸ್ಥೆಯ ವಿಶೇಷ ಸಭೆ ನಡೆಯುವ ಮುನ್ನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಅಮೆರಿಕ ಅಧ್ಯಕ್ಷರಿಗೆ ಫೋನ್ ಮಾಡಿ ಒಂದಷ್ಟು ಹೊತ್ತು ಮಾತುಕತೆಯನ್ನೂ ನಡೆಸಿದರು. ಆದರೆ, ಅಮೆರಿಕದಿಂದ ನೇರವಾಗಿ ಯಾವುದೇ ಬೆಂಬಲದ ಆಶ್ವಾಸನೆ ಪಾಕಿಸ್ತಾನಕ್ಕೆ ಸಿಗಲಿಲ್ಲ.
ಪಾಕಿಸ್ತಾನದ ಪಾಲಿಗೆ ಸರ್ವಕಾಲದ ಆಪ್ತಮಿತ್ರ ಎನಿಸಿರುವ ಚೀನಾ ದೇಶ ಮಾತ್ರವೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಇವತ್ತಿನ ಅನೌಪಚಾರಿಕ ಸಭೆಯಲ್ಲಿ ಪಾಕಿಸ್ತಾನದ ಪರವಾಗಿ ಮಾತನಾಡಿದ್ದು. ಉಳಿದ ನಾಲ್ಕು ರಾಷ್ಟ್ರಗಳು ಕಾಶ್ಮೀರವನ್ನು ದ್ವಿಪಕ್ಷೀಯ ವಿಚಾರವೆಂದು ಪರಿಗಣಿಸಿ ಭಾರತದ ನಿಲುವಿಗೆ ಪರೋಕ್ಷ ಬೆಂಬಲ ನೀಡಿದವು. ಇದು ಹೆಚ್ಚೂಕಡಿಮೆ ಪಾಕಿಸ್ತಾನಕ್ಕೆ ಮುಖಭಂಗವಾದಂತಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಚೀನಾದ ರಾಯಭಾರಿ, ಕಾಶ್ಮೀರ ವಿಚಾರದಲ್ಲಿ ಭಾರತ ಅಕ್ರಮ ರೀತಿಯಲ್ಲಿ ಏಕಪಕ್ಷೀಯ ಕ್ರಮ ಕೈಗೊಂಡಿದೆ. ಇದು ದ್ವಿಪಕ್ಷೀಯ ಒಪ್ಪಂದದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಭಾರತದ ವಿರುದ್ಧ ನೇರವಾಗಿ ಕುಟುಕಿದರು. ಉಳಿದ ನಾಲ್ಕು ದೇಶಗಳು ಭಾರತದ ನಿಲುವಿಗೆ ಪೂರಕವಾಗಿ ಮಾತನಾಡಿವೆ.
ಇದೇ ವೇಳೆ, ವಿಶ್ವಸಂಸ್ಥೆಗೆ ಭಾರತದ ಖಾಯಂ ರಾಯಭಾರಿಯಾಗಿರುವ ಸಯದ್ ಅಕ್ಬರುದ್ದೀನ್ ಅವರು ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ. ಕಾಶ್ಮೀರದ ಸಮಸ್ಯೆಯನ್ನು ದ್ವಿಪಕ್ಷೀಯ ಮಾತುಕತೆಯಿಂದ ಬಗೆಹರಿಸಿಕೊಳ್ಳುವುದನ್ನು ಬಿಟ್ಟು ಪಾಕಿಸ್ತಾನವು ಜಗತ್ತಿಗೆ ಸುಳ್ಳು ಹೇಳಹೊರಟಿದೆ. ಭಯೋತ್ಪಾದನೆ ತ್ಯಜಿಸಿ ಮಾತುಕತೆಗೆ ಬನ್ನಿ. ನಾವು ಶಿಮ್ಲಾ ಒಪ್ಪಂದಕ್ಕೆ ಬದ್ಧರಾಗಿದ್ದೇವೆ ಎಂದು ಸಯದ್ ಅಕ್ಬರುದ್ದೀನ್ ಅವರು ಪಾಕಿಸ್ತಾನಕ್ಕೆ ಸವಾಲು ಹಾಕಿದ್ದಾರೆ.
Comments are closed.