ರಾಷ್ಟ್ರೀಯ

ಪೊಲೀಸರೊಂದಿಗೆ ನಕ್ಸಲರ ಧ್ವಂಸಕ್ಕೆ ಹೊರಟವನಿಗೆ ನಕ್ಸಲ್ ತಂಡದಲ್ಲಿದುದ್ದು ಆತನ ತಂಗಿ!

Pinterest LinkedIn Tumblr


ಜಾರ್ಖಂಡ್: ಇದು ಯಾವುದೇ ಸಿನೇಮಾದ ಕಥೆಯಲ್ಲ ಬದಲಾಗಿ ನಂಬಲು ಕಷ್ಟವಾದರೂ ನಿಜವಾಗಿಯೂ ನಡೆದ ಘಟನೆ. ಛತ್ತೀಸ್ ಗಢ ರಾಜ್ಯದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ ಸುಕ್ಮಾ ಎಂಬಲ್ಲಿ ನಕ್ಸಲರ ಮೇಲೆ ದಾಳಿ ಮಾಡಲು ಪೊಲೀಸರು ಹೋದಾಗ ನಡೆದ ಅಚ್ಚರಿ ಇದು.

ಸುಕ್ಮಾ ಪ್ರದೇಶದಲ್ಲಿ ನಕ್ಸಲರ ಒಂದು ತಂಡ ಕಾರ್ಯಾಚರಿಸುತ್ತಿದೆ ಎಂಬ ಖಚಿತ ಮಾಹಿತಿ ಪಡೆದು ಅಲ್ಲಿಗೆ ದಾಳಿ ನಡೆಸಲು ಹೋದ ಪೊಲೀಸರ ತಂಡದಲ್ಲಿದ್ದ ವೆಟ್ಟಿ ರಾಮ ಎಂಬವರಿಗೆ ಅಲ್ಲೊಂದು ಅಚ್ಚರಿ ಕಾದಿತ್ತು. ಅದೇನೆಂದರೆ ಅವರು ದಾಳಿ ನಡೆಸಲು ಹೋಗಿದ್ದ ನಕ್ಸಲರ ಗುಂಪಿನಲ್ಲಿ ಸ್ವತಃ ವೆಟ್ಟಿ ರಾಮನ ತಂಗಿಯೇ ಇದ್ದಳು. ತನ್ನ ತಂಗಿ ನಕ್ಸಲ್ ಗುಂಪಿನಲ್ಲಿರುವ ವಿಷಯ ವೆಟ್ಟಿ ರಾಮನಿಗೆ ಗೊತ್ತಿದ್ದರೂ ಆಕೆಯನ್ನು ಆ ಕ್ಷಣದಲ್ಲಿ, ಆ ಜಾಗದಲ್ಲಿ ತಾನು ನೋಡುತ್ತೇನೆ ಎಂದು ವೆಟ್ಟಿ ರಾಮ ಊಹಿಸಿಯೂ ಇರಲಿಲ್ಲ.

ಒಂದು ಕಾಲದಲ್ಲಿ ವೆಟ್ಟ ರಾಮನೂ ನಕ್ಸಲ್ ಗುಂಪಿನ ಸದಸ್ಯನೇ ಆಗಿದ್ದ. ಆದರೆ ಬಳಿಕ 2018ರಲ್ಲಿ ಶಸ್ತ್ರತ್ಯಾಗ ಮಾಡಿ ಶರಣಾಗಿದ್ದ. ಶರಣಾಗತಿಯ ನಂತರ ಪೊಲೀಸ್ ಪಡೆ ಸೇರಿದ ವೆಟ್ಟಿ ರಾಮ ಅಲ್ಲಿ ಪೊಲೀಸರಿಗೆ ನಕ್ಸಲ್ ಚಲನವಲನಗಳ ಮಾಹಿತಿ ನೀಡುವ ಕಾರ್ಯವನ್ನೂ ಮಾಡುತ್ತಿದ್ದ.

ಹೀಗಿರುವಾಗ ಮೊನ್ನೆ ಜುಲೈ 29ರಂದು ನಕ್ಸಲ್ ಕಾರ್ಯಾಚರಣೆಗೆ ಹೊರಟಿದ್ದ ಪೊಲೀಸರ ತಂಡದೊಂದಿಗೆ ತೆರಳುವಂತೆ ವೆಟ್ಟಿ ರಾಮನಿಗೆ ತನ್ನ ಮೇಲಧಿಕಾರಿಗಳಿಂದ ಸೂಚನೆ ಸಿಗುತ್ತದೆ. ಹಾಗೆ ತೆರಳಿದ ವೆಟ್ಟಿ ರಾಮನಿಗೆ ಆ ಕಾಡಿನಲ್ಲಿದ್ದ ನಕ್ಸಲ್ ತಂಡದ ಜೊತೆ ಎದುರಾದವಳೇ ಆತನ ಸಹೋದರಿ ವೆಟ್ಟಿ ಕನ್ನಿ.

ಬಳಿಕ ಅಲ್ಲಿ ನಡೆದ ಎನ್ ಕೌಂಟರಿನಲ್ಲಿ ಇಬ್ಬರು ನಕ್ಸಲರು ಮೃತಪಟ್ಟರೂ ವೆಟ್ಟಿರಾಮನ ತಂಗಿ ತನ್ನ ತಂಡದವರ ಜೊತೆ ದಟ್ಟ ಕಾಡಿನಲ್ಲಿ ತಪ್ಪಿಸಿಕೊಂಡು ಹೋಗುತ್ತಾಳೆ. ಈ ಹಿಂದೆಯೂ ವೆಟ್ಟಿ ರಾಮ ತನ್ನ ತಂಗಿಗೆ ಹಲವಾರು ಪತ್ರಗಳನ್ನು ಬರೆದು ಪೊಲೀಸರಿಗೆ ಶರಣಾಗುವಂತೆ ಸೂಚಿಸಿದ್ದ.

ಇದೀಗ ರಕ್ಷಾ ಬಂಧನದ ಕೊಡುಗೆಯಾಗಿ ವೆಟ್ಟಿ ರಾಮ ಮತ್ತೆ ತನ್ನ ತಂಗಿಗೆ ಪತ್ರ ಬರೆದು ಆಕೆಯನ್ನು ಶರಣಾಗತಿಗೆ ಒಪ್ಪಿಸಲು ನಿರ್ಧರಿಸಿದ್ದಾನೆ. ಯಾವುದೇ ಹಬ್ಬಗಳ ಆಚರಣೆಯಲ್ಲಿ ಆಕೆಗೆ ನಂಬಿಕೆ ಇಲ್ಲದಿರುವುದರಿಂದ ತನ್ನ ತಂಗಿ ತನ್ನ ಈ ಮನವಿಯನ್ನು ಪುರಸ್ಕರಿಸುತ್ತಾಳೆ ಎಂಬ ನಂಬಿಕೆ ವೆಟ್ಟಿ ರಾಮನಲ್ಲಿ ಉಳಿದಿಲ್ಲವಂತೆ. ಆದರೆ ನನಗೆ ಉಳಿದಿರುವುದು ಇದೊಂದೇ ಮಾರ್ಗ ಎಂದು ತನ್ನ ತಂಗಿಯನ್ನು ನೆನೆದು ಭಾವುಕನಾಗುತ್ತಾನೆ ವೆಟ್ಟಿ ರಾಮ.

ಒಟ್ಟಿನಲ್ಲಿ, ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ನಕ್ಸಲ್ ತಂಡವನ್ನು ಸೇರಿ ಪೊಲೀಸ್ ಪಡೆಗಳ ಕಣ್ಣು ತಪ್ಪಿಸಿ ಕಾಡು ಮೇಡುಗಳಲ್ಲಿ ಅಲೆಯುತ್ತಾ ಕೊನೆಗೊಂದು ದಿನ ಅದೇ ಪೊಲೀಸರ ಕೈಯಲ್ಲಿ ಎನ್ ಕೌಂಟರ್ ಗೆ ಬಲಿಯಾಗುವ ವೆಟ್ಟಿ ಕನ್ನಿಯಂತವರ ಮನ ಒಲಿಸಿ ಅವರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ಕರೆ ತರುವಲ್ಲಿ ವೆಟ್ಟಿ ರಾಮನಂತವರು ಮಾಡುತ್ತಿರುವ ಭಗೀರಥ ಪ್ರಯತ್ನವನ್ನು ಪ್ರಶಂಸಿಸಲೇಬೇಕು.

Comments are closed.