ರಾಷ್ಟ್ರೀಯ

ಭೂಕುಸಿತ ನೋಡಲು ಬಂದ 50 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ

Pinterest LinkedIn Tumblr


ದೇಶದ 7 ರಾಜ್ಯಗಳಲ್ಲಿ ಈಗ ಜಲಕಂಟಕ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ಒಡಿಶಾ, ರಾಜಸ್ಥಾನ, ಗುಜರಾತ್‌ನಲ್ಲಿ ಪ್ರವಾಹ ತಲೆದೋರಿದೆ. ಪ್ರವಾಹ ಹಾಗೂ ಭೂ ಕುಸಿತಕ್ಕೆ ಊರಿಗೆ ಊರುಗಳೇ ನಾಶವಾಗಿವೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತ ಶಿಬಿರ ಸೇರಿರುವ ಸಂತ್ರಸ್ತರ ಗೋಳು ಹೇಳತೀರದು.

ಕೇರಳದಲ್ಲಿ ಭಾರೀ ಭೂಕುಸಿತ

ಈ ಬಾರಿಯೂ ಭಾರೀ ಮಳೆ ಮತ್ತು ಭೂಕುಸಿತಕ್ಕೆ ತುತ್ತಾಗಿರುವ ಕೇರಳದಲ್ಲಿ ಇಲ್ಲಿವರೆಗೆ 30 ಮಂದಿ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇಂದು ಒಂದೇ ದಿನ 12 ಜನ ಮೃತಪಟ್ಟಿದ್ದಾರೆ.

ಕಳೆದ ವರ್ಷ ಅನುಭವಿಸಿದ ಪ್ರಳಯ ದುರಂತದ ನೋವು ಇನ್ನೂ ಮಾಸಿಲ್ಲ. ಅಷ್ಟೊತ್ತಿಗಾಗಲೇ ಕೇರಳದಲ್ಲಿ ಮತ್ತೊಂದು ಪ್ರಳಯ ಕದ ತಟ್ಟಿದೆ. ಪುತ್ತುಮಲದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಇಡೀ ಊರಿಗೆ ಊರೇ ಸಮಾಧಿಯಾಗಿದೆ. ಕೇರಳದಲ್ಲಿ ಇಲ್ಲಿವರೆಗೆ 24 ಭೂಕುಸಿತ ಸಂಭವಿಸಿವೆ.

ನೋಡಲು ಬಂದವರೂ ಸಮಾಧಿ..!

ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ವಯನಾಡ್ ಜಿಲ್ಲೆ ಸಂಪೂರ್ಣ ಮುಳುಗಿದೆ. ಮೇಪ್ಪಾಡಿ ಪುತ್ತುಮಲದಲ್ಲಿ ಭೂಕುಸಿತದಿಂದಾಗಿ ಮಸೀದಿ, ಇಗರ್ಜಿ ಮತ್ತು ದೇವಾಲಯದ ಕಾರ್ಮಿಕರು ನೆಲೆಸಿದ್ದ ಗುಡಿಸಲುಗಳು ಸಂಪೂರ್ಣ ನೆಲಸಮವಾಗಿದೆ.

50 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಇಲ್ಲಿವರೆಗೆ 7 ಮೃತದೇಹ ಪತ್ತೆಯಾಗಿವೆ. ಭೂಕುಸಿತ ವೀಕ್ಷಿಸಲು ಬಂದವರೂ ನಾಪತ್ತೆಯಾಗಿದ್ದಾರೆ. ಎರಡು ಗ್ರಾಮ ಮುಳುಗಿವೆ. ಈ ಪ್ರದೇಶದಲ್ಲಿದ್ದ 3 ಸೇತುವೆ ಮತ್ತು ಒಂದು ಕಾರು ಕೊಚ್ಚಿ ಹೋಗಿದೆ. ಕಾರಿನಲ್ಲಿದ್ದವರು ಪಾರಾಗಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ರಕ್ಷಣಾ ಕಾರ್ಯಾಚರಣೆಗೆ ಹದಗೆಟ್ಟ ಹವಾಮಾನ ಅಡ್ಡಿಯಾಗಿದೆ.

ಮೋದಿ ಗಮನಸೆಳೆದ ರಾಹುಲ್‌

ತಮ್ಮ ಸಂಸತ್ ಕ್ಷೇತ್ರದಲ್ಲಾಗಿರುವ ಭಾರೀ ಭೂಕುಸಿತದ ಬಗ್ಗೆ ಪ್ರಧಾನಿ ಮೋದಿ ಗಮನ ಸೆಳೆದಿರುವ ರಾಹುಲ್, ಅಗತ್ಯ ನೆರವು ಕೋರಿದ್ದಾರೆ. ಇದಕ್ಕೆ ಸಾಕಾರಾತ್ಮಕವಾಗಿ ಸ್ಪಂದಿಸಿರುವ ಮೋದಿ, ಸೂಕ್ತ ನೆರವಿನ ಭರವಸೆ ನೀಡಿದ್ದಾರೆ. ಈ ಬಗ್ಗೆ ವಯಾನಾಡ್‌ನಲ್ಲಿರುವ ರಾಹುಲ್ ಕಚೇರಿ ಟ್ವೀಟ್‌ ಮಾಡಿದೆ. ಇಲ್ಲಿವರೆಗೆ ವಯಾನಾಡ್‌ನಲ್ಲಿ 260 ಮಿಲಿ ಮೀಟರ್‌ ಮಳೆಯಾಗಿದೆ. ಸುಮಾರು 20 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ.

ಪ್ರವಾಹ ಎದುರಿಸಲು ಕೇರಳ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಿದ್ದು, ಸೇನೆ ಮತ್ತು ವಾಯುಪಡೆ ನೆರವು ಕೋರಿದೆ. ಪ್ರಸ್ತುತ ಚಿಕ್ಕಪುಟ್ಟ ಜಲಾಶಯಗಳಿಂದ ನೀರು ಹೊರಬಿಡಲಾಗಿದೆ. ಆದರೆ, ಸದ್ಯಕ್ಕೆ ದೊಡ್ಡ ಡ್ಯಾಂಗಳಿಂದ ನೀರು ಹೊರಬಿಡುವ ಪರಿಸ್ಥಿತಿ ಉದ್ಭವಿಸಿಲ್ಲ. ಕೇರಳದಲ್ಲಿ 44 ನದಿಗಳಿದ್ದು, ಅರ್ಧಕ್ಕಿಂತಲೂ ಹೆಚ್ಚು ನದಿಗಳು ತುಂಬಿ ಹರಿಯುತ್ತಿವೆ. ಹಾಗೆಯೇ, ಅರ್ಧಕ್ಕಿಂತಲೂ ಹೆಚ್ಚು ಜಲಾಶಯ ಭರ್ತಿಯಾಗಿವೆ. ಕಣ್ಣೂರು ಜಿಲ್ಲೆಯ ಶ್ರೀಕಂಠಪುರ ನಗರ ಸಂಪೂರ್ಣ ಮುಳುಗಿದೆ. ಹೊಳೆಗಳೆಲ್ಲವೂ ಮೈತುಂಬಿ ಹರಿಯುತ್ತಿದ್ದು, ಶ್ರೀಕಂಠಪುರ ನಗರವು ಹೊರಜಗತ್ತಿನ ಸಂಪರ್ಕ ಕಡಿದುಕೊಂಡಿದೆ.

ಕೋಯಿಕ್ಕೋಡ್‌ನ ತಾಮರಶ್ಶೇರಿ ಘಾಟ್‌ನಲ್ಲಿ ಭಾರೀ ವಾಹನಗಳ ಸಂಚಾರ ರದ್ದುಗೊಳಿಸಲಾಗಿದೆ. ಆಲುವಾ ದ್ವೀಪ ಮುಳುಗಿದ್ದು, 550 ಕುಟುಂಬ ರಕ್ಷಿಸಲಾಗಿದೆ. ವಯನಾಡು – ಪೊನ್‌ಕುಳಿಯಲ್ಲಿ ನೀರು ತುಂಬಿದ್ದು, ಹೆದ್ದಾರಿ ಸಂಚಾರ ಸ್ಥಗಿತವಾಗಿದೆ. ವಯಾನಾಡ್ -ಗುಂಡ್ಲುಪೇಟೆ ರಸ್ತೆಯಲ್ಲಿ 13 ಕೆಎಸ್‌ಆರ್‌ಟಿಸಿ ಬಸ್ ಸಿಲುಕಿಕೊಂಡಿದ್ದು, 200 ಪ್ರಯಾಣಿಕರು ಅತಂತ್ರರಾಗಿದ್ದಾರೆ. ಇದರಲ್ಲಿ ಕೆಲವರು ಮೈಸೂರಿಗೆ ಹಿಂದಿರುಗಿದ್ದಾರೆ.

ಕೇರಳದಲ್ಲಿ ಸುಮಾರು 315 ನಿರಾಶ್ರಿತರ ಕೇಂದ್ರ ತೆರೆಯಲಾಗಿದೆ. ಒಟ್ಟು 1 ಲಕ್ಷದ 24 ಸಾವಿರ ಜನರನ್ನ ಸ್ಥಳಾಂತರಿಸಲಾಗಿದೆ. ಇಡೀ ರಾಜ್ಯದಾದ್ಯಂತ ಇಂದು ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮುಂದಿನ ಎರಡು ದಿನಗಳಲ್ಲಿ ಕೇರಳ, ಕರಾವಳಿ, ಕರ್ನಾಟಕದ ದಕ್ಷಿಣ ಒಳನಾಡು, ಮಧ್ಯ ಮಹಾರಾಷ್ಟ್ರ, ಕೊಂಕಣ ಮತ್ತು ಗೋವಾದಲ್ಲಿ ಭೀಕರ ಮಳೆಯಾಗುವ ಸಾಧ್ಯತೆ ಇದೆ.

ವಿಮಾನ ಪಾರ್ಕಿಂಗ್‌ ಸ್ಥಳಕ್ಕೆ ನೀರು ನುಗ್ಗಿದ್ದು, ಭಾನುವಾರ ಮಧ್ಯಾಹ್ನ 3 ಗಂಟೆಯವರೆಗೆ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮುಚ್ಚಲಾಗಿದೆ. ತಾತ್ಕಾಲಿಕವಾಗಿ ಕೊಚ್ಚಿಯಲ್ಲಿ ವಾಯುನೆಲೆ ಬಳಸಿಕೊಳ್ಳಲಾಗ್ತಿದೆ. ಕೇರಳದಲ್ಲಿ ಪ್ರವಾಹ ಹೆಚ್ಚುತ್ತಿದ್ದಂತೆಯೇ ವಾಯುಪಡೆಯು ಹೆಚ್ಚುವರಿ ತಂಡ ಕಳುಹಿಸಿದ್ದು, ಅಹೋರಾತ್ರಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

Comments are closed.