ರಾಷ್ಟ್ರೀಯ

ಸದ್ಯಕ್ಕಿಲ್ಲ ಸಂಪುಟ ರಚನೆ; ಪ್ರವಾಹ ಪರಿಸ್ಥಿತಿಯನ್ನು ಒಬ್ಬರೇ ನಿಭಾಯಿಸಿ ಎಂದ ಹೈಕಮಾಂಡ್!

Pinterest LinkedIn Tumblr


ನವದೆಹಲಿ (ಆಗಸ್ಟ್,08); ರಾಜ್ಯ ಸಚಿವ ಸಂಪುಟ ರಚನೆಗೆ ಅವಸರ ಮಾಡುವುದು ಬೇಡ, ಸದ್ಯಕ್ಕೆ ನೀವು ಒಬ್ಬರೇ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಿ ಮುಂದಿನ ವಾರ ಈ ಕುರಿತು ಚರ್ಚೆ ನಡೆಸೋಣ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆ ಏರಿ ಎರಡು ವಾರಗಳೇ ಕಳೆದಿವೆ. ಆದರೆ, ಇನ್ನೂ ರಾಜ್ಯ ಸಚಿವ ಸಂಪುಟ ರಚನೆ ಆಗಿಲ್ಲ. ಈ ನಡುವೆ ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿದ್ದು ಜನರ ಸಮಸ್ಯೆಯನ್ನು ಆಲಿಸಲು ಮಂತ್ರಿಮಂಡಲವೇ ಇಲ್ಲ ಎಂದು ವಿರೋಧ ಪಕ್ಷಗಳು ನಿರಂತರವಾಗಿ ಟೀಕಿಸುತ್ತಿರುವ ಬೆನ್ನಿಗೆ ರಾಜ್ಯ ಸಚಿವ ಸಂಪುಟ ರಚನೆ ಇನ್ನೂ ಒಂದು ವಾರಕ್ಕೆ ಮುಂದೂಡಲಾಗಿದೆ ಎಂಬ ಸುದ್ದಿಗಳು ಬಿಜೆಪಿ ಮೂಲಗಳಿಂದಲೇ ಹೊರಬೀಳುತ್ತಿದ್ದು ವಿರೋಧ ಪಕ್ಷಗಳಿಂದ ಮತ್ತಷ್ಟು ಟೀಕೆಗೆ ಒಳಗಾಗುವ ಸಾಧ್ಯತೆ ಇದೆ.

ಪ್ರಸ್ತುತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮುಂದೆ ದೊಡ್ಡ ಕಗ್ಗಂಟಾಗಿ ಕಾಡುತ್ತಿರುವ ವಿಚಾರ ಎಂದರೆ ಸಚಿವ ಸಂಪುಟ ರಚನೆ. ಸಂಪುಟ ರಚನೆಗೆ ಆಗುತ್ತಿರುವ ವಿಲಂಬವನ್ನು ಈಗಾಗಲೇ ವಿರೋಧ ಪಕ್ಷಗಳು ಸಾಕಷ್ಟು ಬಾರಿ ಟೀಕಿಸಿವೆ. ಹೀಗಾಗಿ ಸಂಪುಟ ರಚನೆ ಕುರಿತು ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಲು ಯಡಿಯೂರಪ್ಪ ಎರಡು ದಿನಗಳ ಹಿಂದೆಯೇ ದೆಹಲಿಗೆ ತೆರಳಿದ್ದರು. ಆದರೆ, ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಿಎಸ್​ವೈ ಅವರನ್ನು ಭೇಟಿಯಾಗಿಲ್ಲ ಎಂದು ತಿಳಿದುಬಂದಿದೆ.

ಸಂಸತ್ ಕಲಾಪ ಹಾಗೂ ಸುಷ್ಮಾ ಸಾವಿನ ಕಾರಣಕೊಟ್ಟು ಬಿಎಸ್ ವೈ ಅವರನ್ನು ಭೇಟಿಯಾಗದ ಅಮಿತ್ ಶಾ ಫೋನ್ ಮೂಲಕ ಮಾತನಾಡಿ, “ಅವಸರ ಮಾಡಿ ಅವಘಡಕ್ಕೆ ಎಡಮಾಡಕೊಡಬೇಡಿ, ಪ್ರವಾಹ ಪರಿಸ್ಥಿತಿ ಕಾರಣದಿಂದ ಮುಂದೆ ಪರಿತಪಿಸುವಂತಾಗಬಾರದು, ಸವಾಧಾನದಿಂದ ಸಮಾಲೋಚನೆ ಮಾಡಿ ಸಂಪುಟ ರಚಿಸೋಣ. ಅನರ್ಹರು, ಹಿರಿತನ, ಪ್ರದೇಶ, ಜಾತಿಗಳೆಲ್ಲವನ್ನೂ ಪರಿಗಣಿಸಲೇಬೇಕು, 2 ಅಥವಾ 3 ಹಂತಗಳಲ್ಲಿ ಸಂಪುಟ ವಿಸ್ತರಣೆ ಮಾಡೋಣ, ಸದ್ಯಕ್ಕೆ ನೀವೊಬ್ಬರೇ ಪ್ರವಾಹ ಪರಿಸ್ಥಿತಿ ನಿಭಾಯಿಸಿ” ಎಂದು ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಾರೆ ಇಡೀ ರಾಜ್ಯ ಪ್ರಹಾದಿಂದಾಗಿ ತತ್ತರಿಸುತ್ತಿರುವಾಗ ಅದನ್ನು ಸಮರ್ಥವಾಗಿ ನಿಭಾಯಿಸಬೇಕಾದ ಸಚಿವ ಸಂಪುಟವೇ ರಾಜ್ಯದಲ್ಲಿ ಇಲ್ಲದಿರುವುದು ವಿಪರ್ಯಾಸ ಎಂಬ ವಿರೋಧ ಪಕ್ಷಗಳ ಟೀಕೆಗೆ ಮತ್ತಷ್ಟು ಇಂಬು ನೀಡುವಂತೆ, ರಾಜ್ಯ ಸಂಪುಟ ರಚನೆ ಮತ್ತೆ ಒಂದು ವಾರ ಮುಂದೂಡಿರುವುದು ಹಲವರಲ್ಲಿ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ.

Comments are closed.