ನವದೆಹಲಿ[ಆ.06]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದಾದ ಬಳಿಕ, ಕೆಲವು ರಾಜ್ಯಗಳಿಗೆ ಅದರಲ್ಲೂ ಈಶಾನ್ಯ ರಾಜ್ಯಗಳಿಗೆ ವಿಶೇಷ ಮಾನ್ಯತೆ ಕಲ್ಪಿಸಿರುವ 371ನೇ ವಿಧಿಯು ಗಮನ ಸೆಳೆಯುತ್ತಿದೆ. ಈಶಾನ್ಯ ಭಾಗದ ಹಲವು ರಾಜ್ಯಗಳು ಆದಿವಾಸಿ ಸಂಸ್ಕೃತಿಯನ್ನು ಉಳಿಸುವ ಭಾಗವಾಗಿ 371ನೇ ವಿಧಿಯಡಿ ವಿಶೇಷ ಮಾನ್ಯತೆ ಪಡೆದಿವೆ.
ನಾಗಾಗಳ ಧಾರ್ಮಿಕ ಅಥವಾ ಸಾಮಾಜಿಕ ಆಚರಣೆಗಳು, ಅವರ ರೂಢಿಗತ ಕಾನೂನು ಮತ್ತು ಕಾರ್ಯವಿಧಾನ, ಮಾಲೀಕತ್ವ, ಭೂಮಿ ವರ್ಗಾವಣೆ ಮತ್ತು ಸಂಪತ್ತಿಗೆ ಸಂಬಂಧಿಸಿದ ಸಂಸತ್ತಿನ ಯಾವುದೇ ಕಾಯ್ದೆ ನಾಗಾಲ್ಯಾಂಡ್ ರಾಜ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಆರ್ಟಿಕಲ್ 371ಎ ಹೇಳುತ್ತದೆ. ರಾಜ್ಯ ವಿಧಾನಸಭೆಯಲ್ಲಿ ಅನುಮೋದನೆ ಪಡೆದ ನಂತರವಷ್ಟೇ ಅಂತಹ ಕಾಯ್ದೆ ರಾಜ್ಯದಲ್ಲಿ ಅನ್ವಯವಾಗುತ್ತದೆ. 371ಎ ರಾಜ್ಯದ ಭೂಮಿ ಮತ್ತು ಸಂಪತ್ತು ಅಲ್ಲಿನ ಜನರಿಗೆ ಸಂಬಂಧಿಸಿದ್ದೇ ವಿನಃ ಸರ್ಕಾರಕ್ಕಲ್ಲ ಎಂದು ಹೇಳುತ್ತದೆ. ಹೀಗಾಗಿ ಭೂಮಿ ಮಾಲೀಕರು ಸರ್ಕಾರದ ಅಭಿವೃದ್ಧಿ ಕಾರ‍್ಯಗಳಿಗೆ ಅಡ್ಡಿಪಡಿಸುತ್ತಾರೆ. ಇದು ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯುಂಟುಮಾಡುತ್ತಿದೆ ಎಂದು ಇತ್ತೀಚೆಗೆ ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ (ಎನ್‌ಡಿಪಿಪಿ) ಅಸಮಾಧಾನ ವ್ಯಕ್ತಪಡಿಸಿತ್ತು.
ಅದೇ ರೀತಿ ಮಿಜೋರಂಗೆ 371ಜಿ ವಿಶೇಷ ಮಾನ್ಯತೆ ನೀಡಿದೆ. 371ಸಿ, 1972ರಲ್ಲಿ ರಚನೆಯಾಗಿರುವ ಮಣಿಪುರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದೆ. 371ಎಫ್ ಮತ್ತು 371ಎಚ್ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡಿವೆ. ಇನ್ನು ಆಂಧ್ರಪ್ರದೇಶ, ಕರ್ನಾಟಕ ಮತ್ತು ಗೋವಾದಲ್ಲಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದ 371ಡಿ, 371ಇ, 371ಜೆ, 371ಐ ಅಡಿ ವಿಶೇಷ ಮೀಸಲಾತಿಗೆ ಅವಕಾಶ ನೀಡಲಾಗಿದೆ.
Comments are closed.