
ಕಳೆದ 6 ದಶಕಗಳಿಂದ ಭಾರತದಲ್ಲಿ ನಿರಂತರವಾಗಿ ಚರ್ಚಾಸ್ಫದವಾಗಿದ್ದ ಏಕೈಕ ವಿಚಾರ ಎಂದರೆ ಕಲಂ 370 ಹಾಗೂ 35ಎ. ಕಣಿವೆ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಈ ಎರಡೂ ಕಲಂ ಕುರಿತ ಪರ-ವಿರೋಧ ಚರ್ಚೆಗೆ ಇಡೀ ದೇಶ ಸಾಕಷ್ಟು ಬಾರಿ ಸಾಕ್ಷಿಯಾಗಿದೆ.
ಅಸಲಿಗೆ ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾಗಿದ್ದರ ಹಾಗೂ ಕಲಂ 370ರ ಹುಟ್ಟಿನ ಹಿಂದೆ ದೊಡ್ಡ ಇತಿಹಾಸವಿದೆ. 1947ರಲ್ಲಿ ಭಾರತ ಮತ್ತು ಪಾಕ್ ಸ್ವತಂತ್ರ ರಾಷ್ಟ್ರಗಳಾಗಿ ರೂಪಪಡೆದಿದ್ದರೂ ಕಾಶ್ಮೀರದ ರಾಜ ಹರಿಸಿಂಗ್ ಮಾತ್ರ ಯಾವ ರಾಷ್ಟ್ರದ ಜೊತೆಗೂ ಒಂದಾಗದೆ ಸ್ವತಂತ್ರ್ಯವಾಗಿ ಉಳಿಯುವ ಭಯಕೆಯನ್ನು ಹೊಂದಿದ್ದರು.
ಆದರೆ, ಕಣಿವೆ ರಾಜ್ಯದ ಮೇಲೆ 1947ರಲ್ಲಿ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದ ಸಂದರ್ಭದಲ್ಲಿ ರಾಜ ಹರಿಸಿಂಗ್ ಭಾರತದ ಸಹಕಾರ ಕೇಳುತ್ತಾರೆ. ಅಲ್ಲದೆ ಭಾರತದ ಜೊತೆ ವಿಲೀನಗೊಳ್ಳಲು ಒಪ್ಪಿ ಕೆಲವು ಷರತ್ತುಗಳನ್ನು ಮುಂದಿಡುತ್ತಾರೆ. ಹೀಗೆ ಹುಟ್ಟುಪಡೆದದ್ದೇ ಕಲಂ 370. ಕಾಲಾನಂತರದಲ್ಲಿ ಕಲಂ 35ಎ ನ್ನು ಸೇರ್ಪಡೆಗೊಳಿಸಲಾಯಿತು.
ಆದರೆ ಇದೀಗ ಕೇಂದ್ರ ಸರ್ಕಾರ ಈ ಎರಡೂ ಕಲಂಗಳನ್ನು ರದ್ದುಗೊಳಿಸುವ ಮೂಲಕ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನದ ಜೊತೆಗೆ ರಾಜ್ಯದ ಸ್ಥಾನಮಾನವನ್ನೂ ಕಸಿದುಕೊಂಡಿದೆ. ಹಾಗಾದರೆ ಈ ಮುಂಚೆ ಕಣಿವೆ ರಾಜ್ಯಕ್ಕೆ ಏನೆಲ್ಲಾ ಸವಲತ್ತುಗಳಿತ್ತು ? ಪ್ರಸ್ತುತ ಯಾವ ಸವಲತ್ತುಗಳನ್ನು ಈ ರಾಜ್ಯ ಕಳೆದುಕೊಳ್ಳಲಿದೆ? ಇಲ್ಲಿದೆ ಮಾಹಿತಿ.
1.ಜಮ್ಮು ಮತ್ತು ಕಾಶ್ಮೀರ ಭಾರತ ಗಣರಾಜ್ಯದ ಅಂಗವಾದರೂ ಪ್ರತ್ಯೇಕ ಸಂವಿಧಾನವನ್ನು ಹೊಂದವ ಹಕ್ಕನ್ನು ಈ ಹಿಂದೆ ನೀಡಲಾಗಿತ್ತು. ಆದರೆ, ಕೇಂದ್ರದ ನಿರ್ಣಯದಿಂದ ಕಣಿವೆ ರಾಜ್ಯ ಸ್ವಾಭಾವಿಕವಾಗಿ ಈ ಹಕ್ಕನ್ನು ಕಳೆದುಕೊಳ್ಳಲಿದೆ.
2.ಈ ಮುಂಚೆ ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಹಾಗೂ ಸಂಪರ್ಕ ಈ ಖಾತೆಗಳಿಗೆ ಮಾತ್ರ ಭಾರತದ ಕಾನೂನು ಹಾಗೂ ಸಂವಿಧಾನ ಕಾಶ್ಮೀರಕ್ಕೆ ಅನ್ವಯವಾಗುತ್ತಿತ್ತು. ಆದರೆ, ಇದೀಗ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ್ದು ಈ ರಾಜ್ಯದ ಎಲ್ಲಾ ಅಧಿಕಾರ ಕೇಂದ್ರದ ಪಾಲಾಗಲಿದೆ.
3.ಜಮ್ಮು ಕಾಶ್ಮೀರದಲ್ಲಿ ಪೊಲೀಸ್ ವ್ಯವಸ್ಥೆ ಈವರೆಗೆ ರಾಜ್ಯದ ಸರ್ಕಾರದ ಅಧೀನದಲ್ಲಿತ್ತು ಆದರೆ ಇದೀಗ ಈ ಅಧಿಕಾರವೂ ಕೇಂದ್ರ ಸರ್ಕಾರ ನಿಯೋಜಿತ ಗವರ್ನರ್ ಪಾಲಾಗಲಿದೆ.
4.ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರ ಹಾಗೂ ಲಡಾಕ್ ಪ್ರದೇಶವನ್ನು ಭೌಗೋಳಿಕವಾಗಿ ಬೇರ್ಪಡಿಸಿದೆ, ಅಲ್ಲದೆ ರಾಜ್ಯ ಸ್ಥಾನಮಾನವನ್ನು ಕಸಿದುಕೊಂಡು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದೆ. ಹೀಗಾಗಿ ಇಲ್ಲಿ ಚುನಾಯಿತ ವ್ಯಕ್ತಿ ಮುಖ್ಯಮಂತ್ರಿಯಾದರೂ ಎಲ್ಲಾ ಅಧಿಕಾರ ಕೇಂದ್ರ ಸರ್ಕಾರದ ಕೈಯಲ್ಲೇ ಇರಲಿದೆ. ರಾಜ್ಯಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ನಿರ್ಣಯಗಳನ್ನು ಕೇಂದ್ರ ಸರ್ಕಾರವೇ ತೆಗೆದುಕೊಳ್ಳಲಿದೆ.
5.ಈವರೆಗೆ ಭಾರತ ಸರ್ಕಾರದ ಕಾಯ್ದೆ ತಿದ್ದುಪಡಿಗಳು ಕಣಿವೆ ರಾಜ್ಯಕ್ಕೆ ಅನ್ವಯವಾಗುತ್ತಿರಲಿಲ್ಲ. ಆದರೆ, ಇನ್ನು ಎಲ್ಲಾ ತಿದ್ದುಪಡಿಗಳನ್ನು, ನೂತನ ಕಾಯ್ದೆಗಳನ್ನು ಕಣಿವೆ ರಾಜ್ಯದ ಮೇಲೆ ಹೇರಲು ಕೇಂದ್ರ ನಿರಾಳವಾದಂತಾಗಿದೆ.
6.ಕಾಶ್ಮೀರಿಗಳಿಗೆ ಭಾರತ ಪೌರತ್ವದ ಜೊತೆಗೆ ಮೂಲ ಹಾಗೂ ಶಾಶ್ವತ ನಿವಾಸಿಗಳು ಎಂಬ ಮತ್ತೊಂದು ಗುರುತನ್ನೂ ನೀಡಲಾಗಿತ್ತು. ಆದರೆ, ಇನ್ನೂ ಭಾರತೀಯ ಪೌರತ್ವದ ಹೊರತು ಬೇರೆಲ್ಲಾ ಗುರುತುಗಳು ಇಲ್ಲಿ ನಗಣ್ಯವಾಗಲಿದೆ.
7.ಕಲಂ 370ರ ಅನ್ವಯ ಕಾಶ್ಮೀರದ ಮೂಲ ನಿವಾಸಿಗಳ ಹೊರತಾಗಿ ಬೇರೆ ಯಾರೂ ಕಣಿವೆ ರಾಜ್ಯದಲ್ಲಿ ಸ್ಥಿರಾಸ್ತಿ ಚರಾಸ್ತಿಗಳನ್ನು ಹೊಂದುವ ಹಕ್ಕಿರಲಿಲ್ಲ. ಆದರೆ, ಇನ್ನೂ ಯಾರು ಬೇಕಾದರೂ ಇಲ್ಲಿ ಆಸ್ತಿ ಖರೀದಿಸುವ ಹಕ್ಕನ್ನು ಹೊಂದಲಿದ್ದಾರೆ.
8.ಹೊರ ರಾಜ್ಯದವರು ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆಸಲು ಇದ್ದ ನಿರ್ಬಂಧ ಇಂದಿನ ಕೇಂದ್ರದ ನಿರ್ಣಯದಿಂದ ತೆರವಾದಂತಾಗಿದೆ.
9. ಬೇರೆ ರಾಜ್ಯದವರು ಸಹ ಇನ್ನು ಕಣಿವೆ ರಾಜ್ಯದ ಚುನಾವಣೆಗಳಲ್ಲಿ ಸ್ಫರ್ಧಿಸಲು ಅವಕಾಶ ಕಲ್ಪಿಸಿದಂತಾಗಿದೆ.
10. ಕಲಂ 35ಎ ಪ್ರಕಾರ ಈವರೆಗೆ ಹೊರ ರಾಜ್ಯದ ವಿದ್ಯಾರ್ಥಿಗಳು ಇಲ್ಲಿನ ರಾಜ್ಯ ಸರಕಾರ ನಡೆಸುವ ವೃತ್ತಿಪರ ಕೋರ್ಸ್ ಹಾಗೂ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುವಂತಿಲ್ಲ, ಸರಕಾರದ ವಿದ್ಯಾರ್ಥಿ ವೇತನ ಪಡೆಯುವಂತಿಲ್ಲ ಹಾಗೂ ರಾಜ್ಯ ಸರಕಾರದ ಯಾವ ಹುದ್ದೆಗಳಿಗೂ ಬೇರೆ ರಾಜ್ಯದವರಿಗೆ ಅವಕಾಶವಿಲ್ಲ ಎಂಬ ನಿಯಮವಿತ್ತು. ಆದರೆ, ಕಣಿವೆ ರಾಜ್ಯ ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆಯಾಗುತ್ತಿದ್ದಂತೆ ಈ ಎಲ್ಲಾ ನಿಯಮಗಳು ತೆರವಾದಂತಾಗಿವೆ.
Comments are closed.