ರಾಷ್ಟ್ರೀಯ

ಕಾಶ್ಮೀರ ಬಿಕ್ಕಟ್ಟು; ಸರ್ಕಾರ ದುಸ್ಸಾಹಸಕ್ಕೆ ಕೈ ಹಾಕುತ್ತಿದೆ: ಕಾಂಗ್ರೆಸ್​ ನಾಯಕರು

Pinterest LinkedIn Tumblr


ನವದೆಹಲಿ: ಉಗ್ರರ ಬೆದರಿಕೆ ಇರುವುದರಿಂದ ಈ ಕೂಡಲೇ ಕಾಶ್ಮೀರ ಕಣಿವೆಯಿಂದ ಹೊರಹೋಗುವಂತೆ ಪ್ರವಾಸಿಗರು, ಯಾತ್ರಾರ್ಥಿಗಳಿಗ ಕೇಂದ್ರ ಸರ್ಕಾರ ಮಾಡಿರುವ ಆದೇಶವನ್ನು ಕಾಂಗ್ರೆಸ್​ ತೀವ್ರವಾಗಿ ಟೀಕಿಸಿದೆ.

ಜಮ್ಮು-ಕಾಶ್ಮೀರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಹೆಚ್ಚುವರಿಯಾಗಿ ಸಾವಿರಾರು ಸೈನಿಕರನ್ನು ಅಲ್ಲಿ ನಿಯೋಜನೆ ಮಾಡಲಾಗಿದೆ. ಅಲ್ಲದೇ, ಪ್ರವಾಸಿಗರನ್ನು ಕಣವೆ ರಾಜ್ಯದಿಂದ ಹೊರಹೋಗುವಂತೆ ಸೂಚನೆ ನೀಡಲಾಗಿದೆ. ಜಮ್ಮು-ಕಾಶ್ಮೀರಕ್ಕೆ ಸಂವಿಧಾನಬದ್ಧವಾಗಿ ನೀಡಲಾಗಿರುವ ವಿಶೇಷ ಹಕ್ಕನ್ನು ಒಳಗೊಂಡಿರುವ ಆರ್ಟಿಕಲ್​ 35ಎ ಅನ್ನು ಹಿಂಪಡೆಯಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಆರ್ಟಿಕಲ್ 35ಎ ಅನ್ನು ತೆಗೆದುಹಾಕುವ ಯಾವ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿಲ್ಲ ಎಂದು ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್​ ಸ್ಪಷ್ಟನೆ ನೀಡಿದ್ದಾರೆ. ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಕೇಂದ್ರದ ನಡೆಯನ್ನು ಟೀಕಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಬಗ್ಗೆ ಕಾಂಗ್ರೆಸ್​ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್​ ಹಿರಿಯ ಮುಖಂಡ ಪಿ.ಚಿದಂಬರಂ ಮಾತನಾಡಿ, ಕಾಶ್ಮೀರದ ವಿಷಯದಲ್ಲಿ ಕೇಂದ್ರ ಸರ್ಕಾರ ದುಸ್ಸಾಹಸಕ್ಕೆ ಕೈ ಹಾಕಲು ಯೋಚಿಸಿದೆ. ಕಾಶ್ಮೀರ ವಿಷಯವಾಗಿ ಹಲವು ಸಂವಿಧಾನದ ವಿಚಾರಗಳು ಸುಪ್ರೀಂಕೋರ್ಟ್​ನಲ್ಲಿ ಬಾಕಿ ಇವೆ. ನನಗೆ ಇದು ಸ್ಪಷ್ಟವಾಗಿದೆ. ಕಾಶ್ಮೀರದ ವಿಷಯದಲ್ಲಿ ಅವರು ದುಸ್ಸಾಹಕ್ಕೆ ಮುಂದಾಗಲು ಯೋಜಿಸಿದ್ದಾರೆ. ಈ ವಿಚಾರವಾಗಿ ನಾನು ಅವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಗೃಹ ಸಚಿವಾಲಯದ ಆದೇಶ ನಾಗರಿಕರನ್ನು ಭಯಭೀತಗೊಳಿಸಿದೆ. ಇಲ್ಲಿಂದ ಹೊರಡಿ ಎಂದು ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಗೆ ಹೇಳಿದ ಉದಾಹರಣೆಯೇ ಇರಲಿಲ್ಲ. ಕೇಂದ್ರ ಸರ್ಕಾರ ದ್ವೇಷದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಹೊರಗಿನವರಿಗೆ ಕಾಶ್ಮೀರ ಅಸುರಕ್ಷಿತ ಸ್ಥಳ ಎಂದು ಹೇಳುತ್ತಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ವಿಷಾದ ಸೂಚಿಸುತ್ತೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್​ ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಕ್ರಮವನ್ನು ಟೀಕಿಸಿದ್ದಾರೆ.

ಪ್ರವಾಸವನ್ನು ಮೊಟಕುಗೊಳಿಸಿ, ಕಾಶ್ಮೀರದಿಂದ ಹೊರಡಿ ಎಂದು ಶುಕ್ರವಾರ ಕೇಂದ್ರ ಸರ್ಕಾರ ಹೇಳುತ್ತಿದ್ದಂತೆ, ಕಾಶ್ಮೀರದಿಂದ ಹೋಗಲು ವಿದೇಶಿಗರು ಸೇರಿದಂತೆ ಸಾವಿರಾರು ಪ್ರವಾಸಿಗರು ಶನಿವಾರ ಬೆಳಗ್ಗೆ ಶ್ರೀನಗರ ವಿಮಾನನಿಲ್ದಾಣದಲ್ಲಿ ದಾಂಗುಡಿ ಇಟ್ಟರು. ಪ್ರವಾಸಿಗರು ಮತ್ತು ಯಾತ್ರಾರ್ಥಿಗಳನ್ನು ಹಲವು ವಾಹನಗಳಿಂದ ಕಣಿವೆ ರಾಜ್ಯದಿಂದ ಹೊರ ಸಾಗಿಸಲಾಗುತ್ತಿದೆ.

Comments are closed.