ರಾಷ್ಟ್ರೀಯ

ಟ್ರಂಪ್ ‘ಕಾಶ್ಮೀರ ವಿವಾದ ಮಧ್ಯಸ್ಥಿಕೆ’ ಹೇಳಿಕೆ: ಲೋಕಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದ ಕೆ.ಸುರೇಶ್, ಡಿ.ರಾಜಾ

Pinterest LinkedIn Tumblr

ನವದೆಹಲಿ: ಕಾಶ್ಮೀರ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದರು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆ ತೀವ್ರ ಗದ್ದಲ, ಕೋಲಾಹಲಕ್ಕೆ ಕಾರಣವಾಗಿದ್ದು ಮಂಗಳವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಕೆ ಸುರೇಶ್ ನಿಲುವಳಿ ಸೂಚನೆ ಮಂಡಿಸಿದರು.

ಕಾಶ್ಮೀರ ವಿವಾದ ಕುರಿತು ದೇಶ ತನ್ನದೇ ಆದ ನಿಲುವು ಹೊಂದಿದೆ, ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಮೂರನೇ ವ್ಯಕ್ತಿಗೆ ಯಾವತ್ತೂ ಬಿಡುವುದಿಲ್ಲ ಎಂದು ಸುರೇಶ್ ಹೇಳಿದರು.

ಸಂಸದರನ್ನು ಮತ್ತು ದೇಶದ ಜನರ ವಿಶ್ವಾಸಕ್ಕೆ ತೆಗೆದುಕೊಳ್ಳದೆ ನರೇಂದ್ರ ಮೋದಿಯವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಮಧ್ಯಸ್ಥಿಕೆ ವಹಿಸುವಂತೆ ಟ್ರಂಪ್ ಅವರನ್ನು ಕೇಳಲು ಹೇಗೆ ಸಾಧ್ಯ, ಇದೊಂದು ಗಂಭೀರ ವಿಷಯ ಎಂದರು.

ನರೇಂದ್ರ ಮೋದಿಯವರು ಸದನಕ್ಕೆ ಬಂದು ಟ್ರಂಪ್ ಅವರು ನಿನ್ನೆ ನೀಡಿದ ಹೇಳಿಕೆ ಸತ್ಯವೋ, ಸುಳ್ಳು ಎಂದು ಸ್ಪಷ್ಟನೆ ಕೊಡಬೇಕು. ಟ್ರಂಪ್ ಅವರ ಹೇಳಿಕೆಯನ್ನು ಕಣ್ಣುಮುಚ್ಚಿ ಹೇಗೆ ವಿದೇಶಾಂಗ ವ್ಯವಹಾರಗಳ ಸಚಿವರು ನಿರಾಕರಿಸುತ್ತಾರೆ, ಅವರ ಹೇಳಿಕೆ ಪ್ರಮುಖವಾಗಿರುತ್ತದೆ ಎಂದು ಕೂಡ ಸುರೇಶ್ ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಸಿಪಿಐ ಸಂಸದ ಡಿ ರಾಜಾ, ಇದೇ ವಿವಾದಕ್ಕೆ ಸಂಬಂಧಿಸಿದಂತೆ ಸದನದ ಕಲಾಪವನ್ನು ಅಮಾನತುಗೊಳಿಸುವಂತೆ ನೊಟೀಸ್ ನೀಡಿದರು.

Comments are closed.