ರಾಷ್ಟ್ರೀಯ

ನವಿಲನ್ನು ಕೊಂದದ್ದಕ್ಕೆ ಆ ವ್ಯಕ್ತಿಯನ್ನೇ ಕೊಂದು ಹಾಕಿದ ಜನ !

Pinterest LinkedIn Tumblr

ಭೋಪಾಲ್‌: ನವಿಲನ್ನು ಕೊಂದ ಆರೋಪಿಯನ್ನು ಅಲ್ಲಿನ ಜನರೇ ಹಿಡಿದು ಚೆನ್ನಾಗಿ ಥಳಿಸಿರುವ ಘಟನೆ ಮಧ್ಯಪ್ರದೇಶದ ನೀಮುಚ್‌ ಜಿಲ್ಲೆಯ ಲಾಸುದಿಯಾ ಅತ್ರಿ ಗ್ರಾಮದಲ್ಲಿ ನಡೆದಿದೆ.

ಸಂತ್ರಸ್ತನನ್ನು ಹಿರಾಲಾಲ್‌ ಬಂಚಡ ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ.

ಘಟನೆ ಕುರಿತು ರಾಜ್ಯ ಪೊಲೀಸರ 100 ಸಂಖ್ಯೆಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗಾಯಗೊಂಡಿದ್ದ ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸ್‌ ಸೂಪರಿಂಟೆಂಡೆಂಟ್‌ ರಾಕೇಶ್‌ ಸಾಗರ್‌ ತಿಳಿಸಿದ್ದಾರೆ.

ಘಟನೆ ಸಂಬಂಧ ಈಗಾಗಲೇ 10 ಜನರಲ್ಲಿ ಒಂಭತ್ತು ಜನರನ್ನು ಬಂಧಿಸಲಾಗಿದ್ದು, ಕೊಲೆ, ಗಲಭೆ ಮತ್ತು ಎಸ್‌ಸಿ/ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನವಿಲನ್ನು ಕೊಂದಿದ್ದ ಆರೋಪದ ಮೇಲೆ ಸಂತ್ರಸ್ತ, ತಲೆಮರೆಸಿಕೊಂಡಿರುವ ಆತನ ಪುತ್ರ ರಾಹುಲ್‌ ಮತ್ತು ಇತರೆ ಇಬ್ಬರ ವಿರುದ್ಧ ವನ್ಯಜೀವಿ ರಕ್ಷಣಾ ಕಾಯ್ದೆಯಡಿ ವಿರುದ್ಧ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

1972ರ ಭಾರತೀಯ ಅರಣ್ಯ ಕಾಯ್ದೆ ಪ್ರಕಾರ ಭಾರತದ ರಾಷ್ಟ್ರೀಯ ಪಕ್ಷಿ ನವಿಲನ್ನು ಭೇಟೆಯಾಡುವುದು ಮತ್ತು ಹತ್ಯೆ ಮಾಡುವುದನ್ನು ನಿಷೇಧಿಸಲಾಗಿದೆ. ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

ಏನಿದು ಘಟನೆ?
ಕುಕ್ಡೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ 9 ಗಂಟೆ ಸುಮಾರಿನಲ್ಲಿ ಕೃಷಿ ಜಮೀನಿನಲ್ಲಿ ನಾಲ್ವರು ವ್ಯಕ್ತಿಗಳು ಓಡಿ ಹೋಗುತ್ತಿರುವುದನ್ನು ಗ್ರಾಮಸ್ಥರು ನೋಡಿದ್ದಾರೆ. ಅವರ ಬೆನ್ನತ್ತಿದ್ದ ಗ್ರಾಮಸ್ಥರಿಗೆ ಓರ್ವ ಆರೋಪಿ ಸಿಕ್ಕಿಬಿದ್ದಿದ್ದಾನೆ ಮತ್ತು ನಾಲ್ಕು ಸತ್ತ ನವಿಲುಗಳು ಪತ್ತೆಯಾಗಿವೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಆತನನ್ನು ಚೆನ್ನಾಗಿ ಥಳಿಸಿ ಮೈದಾನದಲ್ಲಿ ಬಿಟ್ಟಿದ್ದಾರೆ.

Comments are closed.