ರಾಷ್ಟ್ರೀಯ

ಚೆನ್ನೈನಲ್ಲಿ ಕುಡಿಯುವ ನೀರಿಗೂ ತತ್ವಾರ; ತುರ್ತು ಸಭೆ ಕರೆದ ಮುಖ್ಯಮಂತ್ರಿ

Pinterest LinkedIn Tumblr


ಚೆನ್ನೈ: ಚೆನ್ನೈನಲ್ಲಿ ಕುಡಿಯುವ ನೀರಿಗೂ ತತ್ವಾರ ಸೃಷ್ಟಿಯಾಗಿದ್ದು, ಶುಕ್ರವಾರ ಈ ಸಂಬಂಧ ಸರ್ಕಾರಿ ಹೇಳಿಕೆ ಹೊರಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಲಭ್ಯವಿರುವ ಎಲ್ಲಾ ಮೂಲಗಳಿಂದ ಜನರಿಗೆ ನೀರನ್ನು ಒದಗಿಸಲಾಗುವುದು ಅಲ್ಲದೆ ಜೋಲಾರ್​ಪೇಟೈಯಿಂದ ಪ್ರತಿನಿತ್ಯ 10 ಮಿಲಿಯನ್​ ಲೀಟರ್​ ನೀರನ್ನು ರೈಲಿನ ಮೂಲಕ ಚೆನ್ನೈಗೆ ತರಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಚೆನ್ನೈನಲ್ಲಿ ಅಕ್ಷರಶಃ ಭೀಕರ ಬರ ತಲೆ ದೋರಿದೆ. ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು, ಜನ ಸಾಮಾನ್ಯರು ಹನಿ ನೀರಿಗೂ ಪರದಾಡುವ ಸ್ಥಿತಿ ಎದುರಾಗಿದೆ. ಅಲ್ಲದೆ ಜನರಿಗೆ ನೀರನ್ನು ಪೂರೈಸುವುದು ಸ್ಥಳೀಯ ಆಡಳಿತಕ್ಕೂ ಸವಾಲಾಗಿ ಪರಿಣಮಿಸಿದೆ.

ಪರಿಣಾಮ ಈ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಶುಕ್ರವಾರ ಅಧಿಕಾರಿಗಳ ತುರ್ತು ಸಭೆ ಕರೆದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಜರಿಗೆ ಕುಡಿಯುವ ನೀರನ್ನು ಯಾವ ಮೂಲದಿಂದ ಹೇಗೆ ಪೂರೈಸಬೇಕು ಎಂಬ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಅಧಿಕಾರ ತುರ್ತು ಸಭೆಯ ನಂತರ ಮಾತನಾಡಿದ ಎಡಪ್ಪಾಡಿ ಪಳನಿಸ್ವಾಮಿ, “ಮಾನ್ಸೂನ್​ ಮಾರುತಗಳು ರಾಜ್ಯಕ್ಕೆ ನಿರೀಕ್ಷಿತ ಮಳೆ ಸುರಿಸದ ಕಾರಣ ತೀವ್ರ ನೀರಿನ ಅಭಾವ ಸೃಷ್ಟಿಯಾಗಿದೆ. ಈ ವೇಳೆಗಾಗಲೆ ಕೃಷ್ಣ ನದಿಯಿಂದ 12 ಟಿಎಂಸಿ ನೀರು ತಮಿಳುನಾಡಿಗೆ ಲಭ್ಯವಾಗಬೇಕಿತ್ತು. ಆದರೆ, ಈವರೆಗೆ 2 ಟಿಎಂಸಿ ನೀರು ಮಾತ್ರ ಲಭ್ಯವಾಗಿದೆ. ಚೆನ್ನೈನಲ್ಲಿ ಕುಡಿಯುವ ನೀರಿಗೆ ಈ ಪರಿ ತತ್ವಾರ ಸೃಷ್ಟಿಯಾಗಲು ಇದೂ ಸಹ ಕಾರಣ” ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ “ಚುನಾವಣೆ ಇದ್ದ ಕಾರಣ ನೀರಿನ ಸಮಸ್ಯೆಯನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿತ್ತು. ಆದರೆ, ಇದೀಗ ಚುನಾವಣೆ ಮುಗಿದಿದ್ದು, ನೀರಿನ ಬವಣೆಗೆ ಪರಿಹಾರ ನೀಡಲು ಸರ್ಕಾರ ಯಾವುದೇ ಯೋಜನೆಗೆ ಸಿದ್ದವಾಗಿದೆ. ” ಎಂದು ಆಶ್ವಾಸನೆ ನೀಡಿದ್ದಾರೆ.

1.4 ಕೋಟಿ ಜನ ವಾಸಿಸುವ ಚೆನ್ನೈಗೆ ನೆರೆಯ ಪೂಂಡಿ, ಚೆಂಬರಬಾಕ್ಕಮ್, ಶೋಲವರಂ ಹಾಗೂ ರೆಡ್​ ಹಿಲ್​ ಕೆರೆಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಇದೀಗ ಈ ಎಲ್ಲಾ ಕೆರೆಗಳು ಬಹುತೇಕ ಬತ್ತಿಹೋಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಇದೇ ಕಾರಣಕ್ಕೆ ಚೆನ್ನೈ ದೊಡ್ಡ ಮಟ್ಟದ ಸಮಸ್ಯೆ ಎದುರಾಗಿದೆ. ಇಂದು ಭಾರತದಲ್ಲೇ ಅತಿದೊಡ್ಡ ಮಟ್ಟದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಮೆಟ್ರೋಪಾಲಿಟನ್ ಸಿಟಿ ಎಂಬ ಕುಖ್ಯಾತಿಗೂ ಚೆನ್ನೈ ಪಾತ್ರವಾಗಿದೆ.

ಹೀಗಾಗಿ ಚೆನ್ನೈ ಸಮಸ್ಯೆ ಬಗೆಹರಿಸುವ ಸಲುವಾಗಿ ಕೇರಳ ಸರ್ಕಾರ ಚೆನ್ನೈ ನಗರಕ್ಕೆ ಪ್ರತಿನಿತ್ಯ 20 ಲಕ್ಷ ಲೀಟರ್​ ಕುಡಿಯುವ ನೀರು ಪೂರೈಸಲು ಮುಂದಾಗಿತ್ತು. ಆದರೆ, ಇದನ್ನೂ ಅಲ್ಲಿನ ಮುಖ್ಯಮಂತ್ರಿ ಪಳನಿಸ್ವಾಮಿ ನಿರಾಕರಿಸಿದ್ದರು. ಇಂದಿನ ಸಭೆಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, “ಕೇರಳ ನೀರು ಒದಗಿಸಲು ಮುಂದಾಗಿರುವುದು ಉತ್ತಮ ಸಂಗತಿ, ಈ ಕುರಿತು ನಾನು ಶೀಘ್ರದಲ್ಲಿ ಕೇರಳ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ” ಎಂದು ತಿಳಿಸಿದ್ದಾರೆ.

Comments are closed.