ರಾಷ್ಟ್ರೀಯ

ಬಿಜೆಪಿ-ಟಿಎಂಸಿ ನಡುವೆ ಘರ್ಷಣೆ; ಒಬ್ಬ ಸಾವು, ನಾಲ್ವರ ಸ್ಥಿತಿ ಚಿಂತಾಜನಕ!

Pinterest LinkedIn Tumblr

ಕೋಲ್ಕತ್ತಾ (ಜೂನ್​.20); ಕಳೆದ ಒಂದು ತಿಂಗಳಿನಿಂದ ಪಶ್ಚಿಮ ಬಂಗಾಳದಲ್ಲಿ ನಿರಂತರವಾಗಿ ನಡೆಯುತ್ತಿರುವ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳ ನಡುವಿನ ಸಂಘರ್ಷ ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇಲ್ಲಿನ ಭಟ್ಪಾರ ಎಂಬಲ್ಲಿ ಗುರುವಾರ ನಡೆದ ಮತ್ತೊಂದು ಘರ್ಷಣೆಯಲ್ಲಿ ವ್ಯಕ್ಯಿ ಬಲಿಯಾಗಿದ್ದು, ನಾಲ್ಕು ಜನರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಮೃತ ವ್ಯಕ್ತಿಯನ್ನು ರಾಮ್​ಬಾಬು ಎಂದು ಗುರುತಿಸಲಾಗಿದ್ದು, ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದ ಈತ ಪಾನಿಪುರಿ ಮಾರಟ ಮಾಡಿ ಜೀವನ ಸಾಗಿಸುತ್ತಿದ್ದ ಎಂದು ಹೇಳಲಾಗುತ್ತಿದೆ.

ವರದಿಗಳ ಪ್ರಕಾರ ಇಂದು ಈ ಭಾಗದಲ್ಲಿ ನೂತನ ಪೊಲೀಸ್ ಠಾಣೆಯೊಂದರ ಉದ್ಘಾಟನೆಯಾಗಬೇಕಿತ್ತು. ಈ ಸಂದರ್ಭದಲ್ಲಿ ನಾಡ ಬಾಂಬ್​ ಹಾಗೂ ನಾಡ ಬಂದೂಕುಗಳೊಂದಿಗೆ ಎರಡೂ ಪಕ್ಷಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಗಾಳಿಯಲ್ಲಿ ಹತ್ತಾರು ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ನಡೆದ ಸಂಘರ್ಷಣೆಯಲ್ಲಿ ಓರ್ವ ಮೃತನಾಗಿದ್ದು ನಾಲ್ವರು ಗಾಯಾಳುಗಳಾಗಿದ್ದಾರೆ.

ಬಂಗಾಳದ ಭಟ್ಪಾರ ಭಾಗದಲ್ಲಿ ಕಳೆದ ಮೇ, 19 ರಂದು ಚುನಾವಣೆ ಮುಗಿದ ಬಳಿಕ ಆರಂಭವಾದ ಎರಡು ಪಕ್ಷಗಳ ನಡುವಿನ ಘರ್ಷಣೆ ಬೂದಿ ಮುಚ್ಚಿದ ಕೆಂಡದಂತೆ ಆಗಾಗ್ಗೆ ತಲೆ ಎತ್ತುತ್ತಲೇ ಇದೆ. ನಿರಂತರವಾಗಿ ನಡೆಯುತ್ತಿರುವ ಈ ಘರ್ಷಣೆಯಲ್ಲಿ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಈವರೆಗೆ 10ಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದಾರೆ. ಆದರೂ, ಈ ಘರ್ಷಣೆ ಅಂತ್ಯ ಕಾಣುವ ಯಾವುದೇ ಲಕ್ಷಣಗಳೂ ಗೋಚರಿಸುತ್ತಿಲ್ಲ.

ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಮಾರುಕಟ್ಟೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಶಾಂತಿ ಕಾಪಾಡುವ ಸಲುವಾಗಿ ರಾಪಿಡ್ ಆಕ್ಷನ್​ ಫೋರ್ಸ್​ ಸಿಬ್ಬಂದಿಗಳ ಜೊತೆಗೆ ಪೊಲೀಸ್ ಅಧಿಕಾರಿಗಳ ತಂಡವನ್ನೂ ಬಂದೋಬಸ್ತ್​​ಗೆ ನಿಯೋಜಿಸಲಾಗಿದೆ.

 

Comments are closed.