ರಾಷ್ಟ್ರೀಯ

ಬೇಡಿಕೆಗಳಿಗೆ ಒಪ್ಪಿದ ಮಮತಾ ಬ್ಯಾನರ್ಜಿ: ಏಳು ದಿನಗಳ ಬಳಿಕ ಅಂತ್ಯ ಕಂಡ ವೈದ್ಯರ ಪ್ರತಿಭಟನೆ

Pinterest LinkedIn Tumblr


ಕೋಲ್ಕತ್ತಾ: ಆಸ್ಪತ್ರೆಗಳಲ್ಲಿ ವೈದ್ಯರ ಸುರಕ್ಷತೆಗೆ ಸಂಬಂಧಿಸಿದ 10 ಭದ್ರತಾ ಅಂಶಗಳಿಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸಮ್ಮತಿ ಸೂಚಿಸಿದ್ದಾರೆ. ಈ ಮೂಲಕ ಏಳು ದಿನಗಳ ಹೋರಾಟವು ತೆರೆ ಕಂಡಿದೆ.

ಮಮತಾ ಬ್ಯಾನರ್ಜಿ ಅವರು ಇಂದು 24 ಕಿರಿಯ ವೈದ್ಯರ ಜೊತೆ ನೇರ ಪ್ರಸಾರದ ಮೂಲಕ ಸಭೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ 10 ಭದ್ರತಾ ಅಂಶಗಳನ್ನು ಪ್ರಸ್ತಾಪಿಸಿದರು. ವೈದ್ಯರ ರಕ್ಷಣೆಗಾಗಿ ನಿರ್ದೇಶನ ಮಾಡಲು ಎಲ್ಲ ಆಸ್ಪತ್ರೆಗಳಲ್ಲಿ ಪೊಲೀಸ್ ಇಲಾಖೆಯ ಒಬ್ಬರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗುವುದು. ಜೊತೆಗೆ ವೈದ್ಯರ ಮೇಲೆ ಸುಳ್ಳು ದೂರು ದಾಖಲಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ವೈದ್ಯಕೀಯ ಸ್ಥಾಪನಾ ಕಾಯ್ದೆಗೆ ತಿದ್ದುಪಡಿ ಕುರಿತು ಚರ್ಚೆ ನಡೆಸಲಾಗುತ್ತದೆ. ಪ್ರತಿಯೊಂದು ಆಸ್ಪತ್ರೆಗಳಲ್ಲಿ ಕುಂದುಕೊರತೆ ಘಟಕ ಸ್ಥಾಪಿಸಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಚಿಕಿತ್ಸೆ ಬಗ್ಗೆ ಅತೃಪ್ತಿ ಇದ್ದರೆ ದೂರು ದಾಖಲಿಸಲು ಘಟಕ ಸ್ಥಾಪನೆಗೆ ಮಮತಾ ಬ್ಯಾನರ್ಜಿ ಒಪ್ಪಿಗೆ ಸೂಚಿಸಿದ್ದಾರೆ.

ಯಾವುದೇ ಸರ್ಕಾರವು ಇಂತಹ ಘಟನೆಯಾಗಬೇಕು ಎಂದು ಬಯಸುವುದಿಲ್ಲ. ಉದ್ವಿಗ್ನ ಪರಿಸ್ಥಿತಿಯಿಂದಾಗಿ ಘಟನೆ ನಡೆದಿದ್ದು, ಮತ್ತೆ ಇದು ಸಂಭವಿಸದಂತೆ ನೋಡಿಕೊಳ್ಳಬೇಕಿದೆ. ಎನ್‍ಆರ್‍ಎಸ್ ಪ್ರಕರಣದ ಐವರು ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

ಮಮತಾ ಬ್ಯಾನರ್ಜಿ ಅವರು ಪ್ರಸ್ತಾಪಿಸಿದ 10 ಅಂಶಗಳಿಗೆ ಕಿರಿಯ ವೈದ್ಯರು ಒಪ್ಪಿದ್ದಾರೆ. ಈ ಮೂಲಕ ಮುಷ್ಕರವನ್ನು ಹಿಂಪಡೆದಿದ್ದಾರೆ.

Comments are closed.