ಮುಂಬೈ: ಮುಂಬೈ ವಿಶೇಷ ನ್ಯಾಯಾಲಯದಲ್ಲಿ ಮಲೆಗಾಂವ್ ಸ್ಪೋಟ ಪ್ರಕರಣದ ವಿಚಾರಣೆ ಕೊನೆಯ ಹಂತದಲ್ಲಿದ್ದು, ಪ್ರಕರಣದ ಪ್ರಮುಖ ಆರೋಪಿಯಾಗಿರುವ ನೂತನ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
2008ರಲ್ಲಿ ಮುಂಬೈನಲ್ಲಿ ಸಂಭವಿಸಿದ್ದ ಮಲೆಗಾಂವ್ ಸ್ಫೋಟಕ್ಕೆ 6 ಜನ ಸಾವನ್ನಪ್ಪಿದ್ದರೆ, 100ಕ್ಕೂ ಹೆಚ್ಚು ಜನ ಗಾಯಾಳುಗಳಾಗಿದ್ದರು. ಈ ಪ್ರಕರಣದಲ್ಲಿ ನೂತನ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಪ್ರಮುಖ ಆರೋಪಿಯಾಗಿದ್ದಾರೆ. ಇದೀಗ ಈ ಪ್ರಕರಣದ ವಿಚಾರಣೆ ಕೊನೆಯ ಹಂತದಲ್ಲಿದ್ದು, ಗುರುವಾರ ಸಂಸದೆ ಪ್ರಗ್ಯಾ ಠಾಕೂರ್ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು.
ಆದರೆ, ಬುಧವಾರ ರಾತ್ರಿ ತೀವ್ರ ಹೊಟ್ಟೆ ಸಮಸ್ಯೆಗೆ ಒಳಗಾಗಿದ್ದ ಪ್ರಗ್ಯಾ ಸಿಂಗ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬೆಳಗ್ಗೆ ಡಿಸ್ಜಾರ್ಚ್ ಆಗಿದ್ದಾರೆ. ಹೀಗಾಗಿ ಗುರುವಾರ ಅವರು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ.
ಈ ಕುರಿತು ನ್ಯಾಯಾಲಯಕ್ಕೆ ಮನವಿ ಮಾಡಿರುವ ಪ್ರಗ್ಯಾ ಪರ ವಕೀಲರು “ಅವರಿಗೆ ಆರೋಗ್ಯ ಸರಿಯಿಲ್ಲ. ಅಲ್ಲದೆ ನೂತನ ಸಂಸದೆಯಾಗಿ ಆಯ್ಕೆಯಾಗಿರುವ ಅವರು ಆ ಕುರಿತ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಬೇಕಿದೆ. ಹೀಗಾಗಿ ಕೋರ್ಟ್ಗೆ ಹಾಜರಾಗಲು ಒಂದು ವಾರಗಳ ಕಾಲ ವಿನಾಯಿತಿ ನೀಡಬೇಕು” ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಇದನ್ನು ಕಟುವಾಗಿ ಟೀಕಿಸಿರುವ ಮುಂಬೈ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ವಿ.ಎಸ್. ಪಡಲ್ಕರ್, “ಮಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆ ಕೊನೆಯ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯದ ವಿಚಾರಣೆಗೆ ಗೈರಾಗುವಂತಹ ನಡವಳಿಕೆಯನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ಹೀಗಾಗಿ ಪ್ರಕರಣದ ಪ್ರಮುಖ ಆರೋಪಿ ಪ್ರಗ್ಯಾ ಸಿಂಗ್ ಠಾಕೂರ್ ಶುಕ್ರವಾರ ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಮಲೆಗಾಂವ್ ಸ್ಫೋಟದ ಪ್ರಮುಖ ಆರೋಪಿಯಾಗಿರುವ ಪ್ರಗ್ಯಾ ಸಿಂಗ್ ಠಾಕೂರ್ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಅಲ್ಲದೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಸಂಸತ್ಗೆ ಆಯ್ಕೆಯಾಗಿದ್ಧಾರೆ.