ನವದೆಹಲಿ: ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ನಡೆಗೆ ಬೇಸತ್ತ ಮಾಜಿ ಸಿಎಂ ಅಖಿಲೇಶ್ ಯಾದವ್ ಉತ್ತರಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಎಸ್ಪಿ ಪ್ರತ್ಯೇಕವಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ಧಾರೆ. ಈ ಮೂಲಕ ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಎದುರು ಹೀನಾಯವಾಗಿ ಸೋತ ಮಹಾಘಟಬಂಧನ್ಗೆ ಎಳ್ಳುನೀರು ಬಿಟ್ಟಿದ್ದಾರೆ.
ಉತ್ತರಪ್ರದೇಶದಲ್ಲಿ ಮೈತ್ರಿ ಹಿನ್ನಡೆ ಅನುಭವಿಸಿದ ಬಳಿಕ ಮಾಜಿ ಸಿಎಂ ಮಾಯಾವತಿ ಬೇಸರ ವ್ಯಕ್ತಪಡಿಸಿದ್ದರು. ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ತಮ್ಮ ಪತ್ನಿ ಡಿಂಪಲ್ ಯಾದವ್ ಅವರನ್ನು ಗೆಲ್ಲಿಸಲಾಗದೇ ವಿಫಲರಾಗಿದ್ದಾರೆ. ಹಾಗೆಯೇ ತಮ್ಮ ಇಬ್ಬರು ಸಹೋದರ ಸಂಬಂಧಿಗಳು ಕೂಡ ಸೋತು ಹೋಗಿದ್ಧಾರೆ ಎಂದು ಬಿಎಸ್ಪಿ ಕಾರ್ಯಕರ್ತರ ಸಭೆಯಲ್ಲಿ ಆರೋಪ ಕಿಡಿಕಾರಿದ್ದರು.
ಇನ್ನು ಸಮಾಜವಾದಿ ಪಕ್ಷದ ಜತೆಗಿನ ಮೈತ್ರಿ ಕುರಿತು ವ್ರ ಅತೃಪ್ತಿ ಹೊರಹಾಕಿದ್ದ ಬಿಎಸ್ಪಿ ಮುಖ್ಯಸ್ಥೆ ಕಾರ್ಯಕರ್ತರು ಪಕ್ಷದ ಸಂಘಟನೆಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದ್ದರು. ಅಲ್ಲದೇ ರಾಜ್ಯದಲ್ಲಿ 11 ಸೀಟುಗಳಿಗೆ ಉಪಚುನಾವಣೆ ನಡೆಯಲಿದೆ. ಈ ಬಾರಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತಯಾರಾಗುವಂತೆ ನೂತನ ಸಂಸದ ಮತ್ತು ಶಾಸಕರಿಗೆ ಸೂಚಿಸಿದ್ದರು.
ಇದೇ ವೇಳೆ ನಮ್ಮದು ಶಾಶ್ವತ ಬ್ರೇಕ್ ಅಪ್ ಅಲ್ಲ. ಭವಿಷ್ಯದಲ್ಲಿ ಎಸ್ಪಿ ರಾಜಕೀಯವಾಗಿ ಉತ್ತಮವಾದ ಯಶಸ್ಸು ಗಳಿಸಿದರೇ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೇ ನಾವು ಪ್ರತ್ಯೇಕವಾಗಿಯೇ ಕೆಲಸ ಮಾಡುತ್ತೇವೆ. ಸದ್ಯ ಈ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದು ಘೋಷಿಸಿದರು.
ಈ ಹಿಂದೆಯೇ ಮೊದಲಿಗೆ ಉಪಚುನಾವಣೆಗಾಗಿ ಎಸ್ಪಿ ನಾಯಕ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಮೈತ್ರಿ ಮಾಡಿಕೊಂಡಿದ್ದರು. ಬಿಜೆಪಿ ವಿರುದ್ಧ ಗೆಲುವಿನ ರುಚಿಯನ್ನು ಕಂಡರು. ಬಳಿಕ ಇದೇ ಲೆಕ್ಕಚಾರದಲ್ಲಿ ಲೋಕಸಭಾ ಚುನಾವಣೆಗೂ ಮುನ್ನವೇ ಬಿಎಸ್ಪಿ-ಬಿಎಸ್ಪಿ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡು ಜಂಟಿಯಾಗಿ ಚುನಾವಣೆ ಎದುರಿಸಿದರು. ಇಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣ 80 ಸ್ಥಾನಗಳ ಪೈಕಿ ಬಿಜೆಪಿ 62 ಸ್ಥಾನ ಗಳಿಸಿದರೆ, ಬಿಎಸ್ಪಿ 10 ಹಾಗೂ ಎಸ್ಪಿ 5 ಸ್ಥಾನ ಮಾತ್ರ ಗಳಿಸಿತ್ತು.