
ನವದೆಹಲಿ: “ಎಸ್ಪಿ ಮುಖ್ಯಸ್ಥ ಅಖಿಲೇಶ್ ಅವರೇ ಖುದ್ದು ‘ಯಾದವರ ಮತಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ತಮ್ಮ ಇಡೀ ಕುಟುಂಬ ಚುನಾವಣೆಯಲ್ಲಿ ಹಿನ್ನಡೆ ಆನುಭವಿಸಿದೆ. ಅಖಿಲೇಶ್ ಕನಿಷ್ಠ ತಮ್ಮ ಪತ್ನಿ ಡಿಂಪಲ್ ಯಾದವ್ ಅವರನ್ನು ಗೆಲ್ಲಿಸದೆ ಸೋತಿದ್ದಾರೆ. ತಮ್ಮ ಇಬ್ಬರು ಸೋದರ ಸಂಬಂಧಿಗಳಾದ ಅಕ್ಷಯ್ ಮತ್ತು ಧರ್ಮೇಂದ್ರ ಯಾದವ್ ಅವರು ಕೂಡ ಸೋಲು ಕಂಡಿದ್ದಾರೆ” ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ತಮ್ಮ ಮೈತ್ರಿ ಪಕ್ಷದ ವಿರುದ್ಧವೇ ಕಿಡಿಕಾರಿದ್ದಾರೆ.
ನಗರದಲ್ಲಿ ನಡೆದ ಬಿಎಸ್ಪಿ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 11 ಸೀಟುಗಳಿಗೆ ಉಪಚುನಾವಣೆ ನಡೆಯಲಿದೆ. ಈ ಬಾರಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತಯಾರಾಗುವಂತೆ ನೂತನ ಸಂಸದ ಮತ್ತು ಶಾಸಕರಿಗೆ ಮಾಯಾವತಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಮಹಾಘಟಬಂಧನ್ ಭವಿಷ್ಯದ ಬಗ್ಗೆ ಪ್ರಶ್ನೆಗಳಿರುವಂತೆಯೇ ಎಸ್ಪಿ ಜೊತೆಗಿನ ಮೈತ್ರಿ ಕೊನೆಗೊಳಿಸುವ ಬಗ್ಗೆ ಮನ್ಸೂಚನೆ ನೀಡಿದ್ದಾರೆ.
ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಕಟ್ಟಿಹಾಕಬೇಕು ಎಂಬ ಉದ್ದೇಶದೊಂದಿಗೆ ಮಹಾಮೈತ್ರಿ ಮಾಡಿಕೊಂಡಿದ್ದ ಎಸ್ಪಿ ಹಾಗೂ ಬಿಎಸ್ಪಿ ಹಿನ್ನಡೆಯಾಗಿತ್ತು. ಇದರ ಪರಿಣಾಮ ಮುಂಬರುವ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಫರ್ಧಿಸಲು ಬಿಎಸ್ಪಿ ನಿರ್ಧರಿಸಿದೆ. ಶೀಘ್ರದಲ್ಲೇ 11 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಏಕಾಂಗಿಯಾಗಿ ಸ್ಪರ್ಧಿಸಲು ಪಕ್ಷದ ನಾಯಕಿ ಮಾಯಾವತಿ ನಿರ್ಧರಿಸಿದ್ದಾರೆ.
ಇಂದಿನ ಸಭೆಯಲ್ಲಿ ಸಮಾಜವಾದಿ ಪಕ್ಷದ ಜತೆಗಿನ ಮೈತ್ರಿ ಕುರಿತು ಮಾಯಾವತಿ ತೀವ್ರ ಅತೃಪ್ತಿ ಹೊರಹಾಕಿದ್ದಾರೆ. ಎಸ್ಪಿ ನಾಯಕ ಅಖಿಲೇಶ್ ಯಾದವ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಮೈತ್ರಿ ಬಗ್ಗೆ ಯೋಚಿಸದೇ ಕಾರ್ಯಕರ್ತರು ಪಕ್ಷದ ಸಂಘಟನೆಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.
ಈ ಹಿಂದೆ ಮೊದಲಿಗೆ ಉಪಚುನಾವಣೆಗಾಗಿ ಎಸ್ಪಿ ನಾಯಕ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಮೈತ್ರಿ ಮಾಡಿಕೊಂಡಿದ್ದರು. ಬಿಜೆಪಿ ವಿರುದ್ಧ ಗೆಲುವಿನ ರುಚಿಯನ್ನು ಕಂಡರು. ಬಳಿಕ ಇದೇ ಲೆಕ್ಕಚಾರದಲ್ಲಿ ಲೋಕಸಭಾ ಚುನಾವಣೆಗೂ ಮುನ್ನವೇ ಬಿಎಸ್ಪಿ-ಬಿಎಸ್ಪಿ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡು ಜಂಟಿಯಾಗಿ ಚುನಾವಣೆ ಎದುರಿಸಿದರು. ಇಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣ 80 ಸ್ಥಾನಗಳ ಪೈಕಿ ಬಿಜೆಪಿ 62 ಸ್ಥಾನ ಗಳಿಸಿದರೆ, ಬಿಎಸ್ಪಿ 10 ಹಾಗೂ ಎಸ್ಪಿ 5 ಸ್ಥಾನ ಮಾತ್ರ ಗಳಿಸಿತ್ತು.
Comments are closed.